Belagavi

ರಾಣಿ ಚನ್ನಮ್ಮನವರಿಗೆ ರಾಷ್ಟ್ರೀಯ ಮಾನ್ಯತೆ ನೀಡಲು ಬಸವರಾಜ ಹೊರಟ್ಟಿ ಅವರಿಗೆ ಮನವಿ

Share

ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ, ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲು ಸಮಿತಿ ಒತ್ತಾಯ

ಹುಬ್ಬಳ್ಳಿ: 1824ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಕಿತ್ತೂರು ರಾಣಿ ಚನ್ನಮ್ಮನವರು ನಡೆಸಿದ ಐತಿಹಾಸಿಕ ಸಶಸ್ತ್ರ ಹೋರಾಟವನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಆರಂಭಿಕ ಮಹತ್ವದ ಅಧ್ಯಾಯವೆಂದು ಗುರುತಿಸಿ, ರಾಣಿ ಚನ್ನಮ್ಮನವರನ್ನು ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯೆಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಹಾಗೂ ಕಿತ್ತೂರಿನ ಐತಿಹಾಸಿಕ ಕೋಟೆ, ಅರಮನೆ ಸೇರಿದಂತೆ ಸಂಸ್ಥಾನಕ್ಕೆ ಸಂಬಂಧಿಸಿದ ಸ್ಮಾರಕಗಳಿಗೆ ರಾಷ್ಟ್ರೀಯ ಮಹತ್ವದ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿ ಮಾಜಿ ವಿಧಾನ ಪರಿಷತ್ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿಯಲ್ಲಿರುವ ಬಸವರಾಜ ಹೊರಟ್ಟಿ ಅವರ ನಿವಾಸದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಈ ಮಹತ್ವದ ಐತಿಹಾಸಿಕ ವಿಷಯವನ್ನು ಪ್ರಸ್ತಾಪಿಸಿ, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಸವರಾಜ ಹೊರಟ್ಟಿ ಅವರನ್ನು ವಿನಂತಿಸಲಾಯಿತು.

1824ರಲ್ಲಿಯೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಸಾಹತುಶಾಹಿ ಆಡಳಿತದ ವಿರುದ್ಧ ರಾಣಿ ಚನ್ನಮ್ಮನವರು ಸಶಸ್ತ್ರ ಪ್ರತಿರೋಧ ನಡೆಸಿ ತಮ್ಮ ಶೌರ್ಯ, ಧೈರ್ಯ ಹಾಗೂ ದೇಶಪ್ರೇಮವನ್ನು ಮೆರೆದಿದ್ದಾರೆ. ಅವರ ಹೋರಾಟಕ್ಕೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಸೂಕ್ತವಾದ ರಾಷ್ಟ್ರೀಯ ಮನ್ನಣೆ ದೊರೆಯಬೇಕೆಂಬುದು ಸಮಿತಿಯ ಪ್ರಮುಖ ಆಶಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಿತ್ತೂರು ಐತಿಹಾಸಿಕ ಸ್ಮಾರಕಗಳಿಗೆ ರಾಷ್ಟ್ರೀಯ ಮಾನ್ಯತೆ:

ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯ್ದೆ, 1958ರ ಅಡಿಯಲ್ಲಿ ಕಿತ್ತೂರು ಕೋಟೆ, ಚನ್ನಮ್ಮನವರ ಅರಮನೆ, ಬೈಲಹೊಂಗಲದಲ್ಲಿರುವ ರಾಣಿ ಚನ್ನಮ್ಮನವರ ಸಮಾಧಿ ಸ್ಥಳ, ಕಾಗತಿ ಸೇರಿದಂತೆ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಐತಿಹಾಸಿಕ ಸ್ಮಾರಕಗಳನ್ನು ರಾಷ್ಟ್ರೀಯ ಮಹತ್ವದ ಸ್ಮಾರಕಗಳೆಂದು ಗುರುತಿಸಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮೂಲಕ ಸಂರಕ್ಷಣೆ ಮತ್ತು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಈ ಮಾನ್ಯತೆಯಿಂದ ಕಿತ್ತೂರಿನ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವುದರ ಜತೆಗೆ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಾಧ್ಯವಾಗಲಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಾಣಿ ಚನ್ನಮ್ಮನವರ ಹೆಸರಿನಲ್ಲಿ ಭಾರತೀಯ ಸೇನೆಯಲ್ಲಿ ರೆಜಿಮೆಂಟ್ ಸ್ಥಾಪನೆ, ಕಿತ್ತೂರನ್ನು ರಾಷ್ಟ್ರೀಯ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆ, ಕೋಟೆ ಆವರಣದಲ್ಲಿ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಕಲ್ಮಠದ ಆವರಣದಲ್ಲಿರುವ ಅರಸರ ಸಮಾಧಿಗಳು ಹಾಗೂ ಚೌಕಿಮಠದಲ್ಲಿರುವ ರಾಜಗುರುಗಳ ಸಮಾಧಿ ಸ್ಮಾರಕಗಳ ಸಂರಕ್ಷಣೆ, ರಾಷ್ಟ್ರೀಯ ಸಂಶೋಧನಾ ಕೇಂದ್ರ ಸ್ಥಾಪನೆ, ಕಿತ್ತೂರು ಉತ್ಸವಕ್ಕೆ ರಾಷ್ಟ್ರೀಯ ಉತ್ಸವದ ಮಾನ್ಯತೆ, ರಾಣಿ ಚನ್ನಮ್ಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ ಸ್ಥಾಪನೆ ಹಾಗೂ ಶಾಲಾ ಪಠ್ಯಪುಸ್ತಕಗಳಲ್ಲಿ ರಾಣಿ ಚನ್ನಮ್ಮನವರ ಸಮಗ್ರ ಇತಿಹಾಸವನ್ನು ವಿವಿಧ ಭಾಷೆಗಳಲ್ಲಿ ಅಳವಡಿಸುವುದು ಸೇರಿದಂತೆ ಒಟ್ಟು 11 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.

ರಾಣಿ ಚನ್ನಮ್ಮನವರನ್ನು ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯೆಂದು ಅಧಿಕೃತವಾಗಿ ಘೋಷಿಸುವ ಬೇಡಿಕೆಗೆ ಪೂರಕವಾಗಿ 15 ಐತಿಹಾಸಿಕ ದಾಖಲೆಗಳು ಹಾಗೂ ಉಲ್ಲೇಖಗಳ ಪಟ್ಟಿಯನ್ನು ಮನವಿಯೊಂದಿಗೆ ಲಗತ್ತಿಸಲಾಗಿದೆ. ಅಲ್ಲದೆ, ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ಐತಿಹಾಸಿಕ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಬೇಡಿಕೆಗಳನ್ನೂ ಸಲ್ಲಿಸಲಾಗಿದೆ.

ಕಿತ್ತೂರು ರಾಣಿ ಚನ್ನಮ್ಮನವರ ಹೋರಾಟಕ್ಕೆ ರಾಷ್ಟ್ರೀಯ ಮಟ್ಟದ ಅಧಿಕೃತ ಮನ್ನಣೆ ದೊರಕಿಸುವುದು ಕೇವಲ ಒಂದು ಪ್ರದೇಶದ ಬೇಡಿಕೆಯಲ್ಲ; ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರಿನ ಕೊಡುಗೆಯನ್ನು ಸೂಕ್ತವಾಗಿ ಗುರುತಿಸಿ, ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವಾಗಿದೆ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ

Tags:

error: Content is protected !!