Belagavi

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶರಣಕುಮಾರ ಲಿಂಬಾಳೆ ವಿರುದ್ಧ ಬೆಳಗಾವಿಯಲ್ಲಿ ಎಂಇಎಸ್ ಯುವ ಸಮಿತಿ ಆಕ್ರೋಶ; ಕ್ಷಮೆಯಾಚನೆ ಹಾಗೂ ರಾಜೀನಾಮೆಗೆ ಆಗ್ರಹ

Share

ಕಳೆದ 70 ವರ್ಷಗಳಿಂದ ನಡೆಯುತ್ತಿರುವ ಗಡಿ ಹೋರಾಟ ಹಾಗೂ ಬೆಳಗಾವಿ ಸೇರಿದಂತೆ ಗಡಿಭಾಗದ ಮರಾಠಿ ಭಾಷಿಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ನೂತನ ಅಧ್ಯಕ್ಷ ಶರಣಕುಮಾರ ಲಿಂಬಾಳೆ ವಿರುದ್ಧ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ವತಿಯಿಂದ ಶರಣಕುಮಾರ ಲಿಂಬಾಳೆ ಅವರ ವಿರುದ್ಧ ಪ್ರತಿಭಟನೆ ನಡೆಸಿ, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಯಿತು. ಗಡಿಭಾಗದ ಮರಾಠಿ ಭಾಷಿಕರು ಹಾಗೂ ಸಮಸ್ತ ಮಹಾರಾಷ್ಟ್ರದ ಕ್ಷಮೆಯಾಚಿಸಿ ಲಿಂಬಾಳೆ ಅವರು ರಾಜೀನಾಮೆ ನೀಡಬೇಕು. ಒಂದು ವೇಳೆ ಸಾಹಿತ್ಯ ಪರಿಷತ್ತು ಮತ್ತು ಮಹಾರಾಷ್ಟ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ಸಮಸ್ತ ಬೆಳಗಾವಿಗರ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಈ ಕುರಿತು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೇಶ್ ಸೋಮಣ್ ಮತ್ತು ಮರಾಠಿ ಭಾಷಾ ಸಚಿವ ಉದಯ್ ಸಾಮಂತ್ ಅವರಿಗೂ ಮನವಿ ಪತ್ರ ರವಾನಿಸಲಾಗಿದೆ.

ಈ ಸಂದರ್ಭದಲ್ಲಿ ಎಂಇಎಸ್ ಯುವ ಸಮಿತಿ ಅಧ್ಯಕ್ಷ ಅಂಕುಶ್ ಕೇಸರಕರ್, ಉಪಾಧ್ಯಕ್ಷ ವಾಸು ಸಾಮಜೀ, ರಾಜು ಕದಮ್, ಸೂರಜ್ ಕುಡಚಕರ್, ವಿನಾಯಕ ಕಾವಳೆ, ಪ್ರವೀಣ್ ರೇಡೇಕರ್, ಶ್ರೀಕಾಂತ್ ಕದಂ, ಕೌಶಿಕ್ ಶಿಂಧೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!