ವಿಜಯಪುರ ನಗರದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೇರಿದ ನಿವಾಸಗಳು, ಕಚೇರಿ ಹಾಗೂ ತೋಟದ ಮನೆಯ ಮೇಲೆ ವಿಜಯಪುರ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹುಚ್ವಪ್ಪ ಶಿಂಗೆಗೋಳ ಅವರಿಗೆ ಸಂಬಂಧಿಸಿದ ನಗರದ ಸುಕೂನ್ ಕಾಲೋನಿಯ ನಿವಾಸ, ಚಾಲುಕ್ಯ ನಗರದ ನಿವಾಸ, ಹಿಟ್ನಳ್ಳಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿರುವ ಕಚೇರಿ ಹಾಗೂ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿರುವ ತೋಟದ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಮಹಾನಿಂಗರಾಯ ನಂದಗಾವಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಿಪಿಐ ಆನಂದ ಟಕ್ಕಣ್ಣವರ ಸೇರಿದಂತೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ನಾಲ್ಕೂ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳು ಹಾಗೂ ವಿವಿಧ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದು, ಲೋಕಾಯುಕ್ತರ ಕಾರ್ಯಾಚರಣೆ ಮುಂದುವರಿದಿದೆ. ದಾಳಿಯ ಸಂಪೂರ್ಣ ವಿವರ ಹಾಗೂ ಪರಿಶೀಲನೆಯ ನಂತರ ಲಭ್ಯವಾಗುವ ಮಾಹಿತಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ.
