ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಗ್ರಾಮೀಣ ಭಾಗದ ಜನರ ದಾಹ ಮಾತ್ರ ನೀಗುತ್ತಿಲ್ಲ. ಹರಪನಹಳ್ಳಿ ತಾಲೂಕಿನ ಹುಣಸಿಹಳ್ಳಿ ಗ್ರಾಮಸ್ಥರು ನಿತ್ಯವೂ ಹನಿ ನೀರಿಗಾಗಿ ಪರದಾಡುವ ದುಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹರಪನಹಳ್ಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಸುಮಾರು 400ಕ್ಕೂ ಹೆಚ್ಚು ಮನೆಗಳಿರುವ ಈ ಗ್ರಾಮಕ್ಕೆ ಇರುವುದು ಒಂದೇ ಒಂದು ಬೋರ್‌ವೆಲ್. ಅದರಲ್ಲೂ ಅಂತರ್ಜಲ ಕುಸಿದು ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವುದರಿಂದ, ಗ್ರಾಮಸ್ಥರು ನಿತ್ಯವೂ ಕೊಡ ಹಿಡಿದು ನೀರಿಗಾಗಿ ಹರಸಾಹಸ ಪಡುವಂತಾಗಿದೆ.
ಕಳೆದ ಶನಿವಾರವಷ್ಟೇ ಸಾಸ್ವೆಹಳ್ಳಿ ಪಂಚಾಯತ್‌ನಲ್ಲಿ ‘ಪ್ರಜಾಸೇವೆ’ ಕಾರ್ಯಕ್ರಮ ನಡೆದಿದ್ದರೂ, ಶಾಸಕರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಹುಣಸಿಹಳ್ಳಿ ಗ್ರಾಮದತ್ತ ತಿರುಗಿಯೂ ನೋಡಿಲ್ಲ. ಪಿಡಿಒ ಒಮ್ಮೆ ಗ್ರಾಮಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಹೋದವರು, ಇತ್ತ ಸುಳಿದಿಲ್ಲ. ಪಂಚಾಯತ್ ಅಧಿಕಾರಿಗಳು ಅನುದಾನವಿಲ್ಲ ಎಂಬ ಸಬೂಬು ಹೇಳುತ್ತಾ, ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
