ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಪಾನ್ ಪ್ರವಾಸ ಕೈಗೊಂಡಿದ್ದು, ಮಹತ್ವದ ಸಭೆಗಳನ್ನು ನಡೆಸುತ್ತಿದ್ದಾರೆ. ಪ್ರವಾಸದ ಭಾಗವಾಗಿ ಜಪಾನ್ನ ವಿಶ್ವಪ್ರಸಿದ್ಧ ಬುಲೆಟ್ ರೈಲಿನಲ್ಲಿ ನಗೋಯಾ ನಗರಕ್ಕೆ ಪ್ರಯಾಣಿಸಿರುವ ಸಿಎಂ, ಅಲ್ಲಿನ ದಿಗ್ಗಜ ವಾಹನ ತಯಾರಿಕಾ ಕಂಪನಿ ಟೊಯೋಟಾ ಕೇಂದ್ರ ಕಚೇರಿಗೆ ಭೇಟಿ ನೀಡಿದರು.
ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಇಂದು ವಿಶ್ವಪ್ರಸಿದ್ಧ ಬುಲೆಟ್ ರೈಲಿನಲ್ಲಿ ಟೋಕಿಯೋದಿಂದ ನಗೋಯಾ ನಗರಕ್ಕೆ ಪ್ರಯಾಣ ಬೆಳೆಸಿದರು. ಈ ವೇಳೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ರಾಜ್ಯದ ಉನ್ನತ ಮಟ್ಟದ ನಿಯೋಗವು ಮುಖ್ಯಮಂತ್ರಿಯವರಿಗೆ ಸಾಥ್ ನೀಡಿತು. ಜಪಾನ್ಗೆ ಬಂದಿಳಿದ ಸಿಎಂ ಮತ್ತು ನಿಯೋಗಕ್ಕೆ ಸ್ಥಳೀಯವಾಗಿ ಅದ್ದೂರಿ ಸ್ವಾಗತ ದೊರೆತಿದೆ.ನಗೋಯಾ ನಗರ ತಲುಪಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಅವರು ಜಾಗತಿಕ ವಾಹನ ತಯಾರಿಕಾ ದಿಗ್ಗಜ ಟೊಯೋಟಾ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವುದು ಈ ಭೇಟಿಯ ಪ್ರಮುಖ ಗುರಿಯಾಗಿದ್ದು, ಈ ಪ್ರವಾಸವು ಕರ್ನಾಟಕ ಮತ್ತು ಜಪಾನ್ ನಡುವಿನ ಆರ್ಥಿಕ ಹಾಗೂ ತಾಂತ್ರಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
