Belagavi

ಬೆಳಗಾವಿ ಅಧಿವೇಶನದಲ್ಲಿ ಸಾರ್ವಜನಿಕ ತೆರಿಗೆ ದುರ್ಬಳಕೆ ಆರೋಪ: ತನಿಖೆಗೆ ಭೀಮಪ್ಪ ಗಡಾದ್ ಆಗ್ರಹ

Share

ಬೆಳಗಾವಿ ಚಳಿಗಾಲದ ಅಧಿವೇಶನದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಹಣ ದುರ್ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜರ್ಮನ್ ಟೆಂಟ್, ಸಿಸಿ ಕ್ಯಾಮರಾ ಬಾಡಿಗೆ ಹಾಗೂ ವಿಐಪಿ ಕೊಠಡಿಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಕಿಡಿಕಾರಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆ ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂದಿ ವಸತಿಗಾಗಿ 2024ರಲ್ಲಿ ಸುಮಾರು 4.74 ಕೋಟಿ ರೂಪಾಯಿ ವೆಚ್ಚದಲ್ಲಿ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ ಹಾಗೂ ಸಿಸಿ ಕ್ಯಾಮರಾಗಳ ಬಾಡಿಗೆ ಹೆಸರಿನಲ್ಲಿ ಬೃಹತ್ ಮೊತ್ತ ವ್ಯಯಿಸಲಾಗುತ್ತಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮಾಧ್ಯಮಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ನಗರದ ಪ್ರತಿಷ್ಠಿತ ಹೋಟೆಲುಗಳಲ್ಲಿ ನೀಡಿರುವ 255 ವಿಐಪಿ ಕೊಠಡಿಗಳಲ್ಲಿ ತಂಗಿದ್ದವರ ಮಾಹಿತಿಯನ್ನು ಭದ್ರತೆಯ ನೆಪದಲ್ಲಿ ಮುಚ್ಚಿಡಲಾಗುತ್ತಿದೆ ಎಂದ ಅವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲದವರಿಗೂ, ಸಚಿವರು-ಶಾಸಕರ ಹಿಂಬಾಲಕರು ಹಾಗೂ ಸಂಘಟನೆಗಳ ಅಧ್ಯಕ್ಷರಿಗೂ ಸರ್ಕಾರದ ವೆಚ್ಚದಲ್ಲಿ ಕೊಠಡಿ ಹಂಚಿಕೆ ಮಾಡುವ ಮೂಲಕ ಆರ್ಥಿಕ ನಷ್ಟ ಉಂಟುಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಈ ಸಂಬಂಧ ದಾಖಲೆಗಳ ಸಮೇತ ಉಭಯ ಸದನಗಳ ಪೀಠಾಧ್ಯಕ್ಷರಿಗೆ ಪತ್ರ ಬರೆದು ಸಮಗ್ರ ತನಿಖೆಗೆ ಒತ್ತಾಯಿಸಿರುವ ಭೀಮಪ್ಪ ಗಡಾದ್, ಕೊಠಡಿ ಹಂಚಿಕೆಯ ಮಾನದಂಡಗಳು, ಸಿಸಿ ಕ್ಯಾಮರಾ ಬಾಡಿಗೆ ದರ ಹಾಗೂ ಶಾಶ್ವತ ಖರೀದಿ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ತನಿಖೆಗೆ ನಿರ್ದೇಶನ ನೀಡದಿದ್ದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಹಾಗೂ ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಥವಾ ನ್ಯಾಯಾಲಯದ ಮೂಲಕ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!