ದೆಹಲಿಗೆ ಸಚಿವರು ಭೇಟಿ ನೀಡಿದಾಗ ಹೈಕಮಾಂಡ್ ನಾಯಕರನ್ನು ಭೇಟಿಯಾಗುವುದು ಸಹಜ ಪ್ರಕ್ರಿಯೆಯೇ ಹೊರತು, ಅದರ ಹಿಂದೆ ಯಾವುದೇ ರಾಜಕೀಯ ಕಾರ್ಯಸೂಚಿ ಇರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇಲಾಖೆಯ ಕೆಲಸಗಳ ನಿಮಿತ್ತ ದೆಹಲಿಗೆ ಬರುವುದು ಸಾಮಾನ್ಯ ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವಾಗಲಿ ಅಥವಾ ಇತರ ಯಾವುದೇ ಸಚಿವರಾಗಲಿ ದೆಹಲಿಗೆ ಬಂದಾಗ ಅದಕ್ಕೆ ವಿಶೇಷ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇಲಾಖೆಯ ಕೆಲಸಗಳ ನಿಮಿತ್ತ ಭೇಟಿ ನೀಡುವುದು ಸಾಮಾನ್ಯ ಎಂದು ತಿಳಿಸಿದರು.
ರಾಜ್ಯ ರಾಜಕೀಯ ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಮಾತನಾಡಿದ ಸಚಿವರು, ಇತ್ತೀಚೆಗೆ ಹಿರಿಯೂರಿನಲ್ಲಿ ಸಮುದಾಯವಾರು ಸಭೆ ನಡೆಸಲಾಗಿದೆ. ಹಿರಿಯೂರಿಗೆ ಎಲ್ಲ ನಾಯಕರು ಹೋಗುತ್ತಿದ್ದಾರೆ, ಅದೇ ರೀತಿ ನಾನೂ ಹೋಗಿದ್ದೆ. ಇದಕ್ಕೂ ಮುಂಚೆ ಸಾಕಷ್ಟು ಬೈ ಎಲೆಕ್ಷನ್ ಎದುರಿಸಿದ್ದೇವೆ ಹಾಗೂ ಸಮುದಾಯವಾರು ಮತ್ತು ಜಿಲ್ಲಾ ಪಂಚಾಯಿತಿ ವಾರು ಸಭೆಗಳನ್ನು ಮಾಡಿದ್ದೇವೆ. ಪಕ್ಷವನ್ನು ಸಂಘಟಿಸುವುದು ಮತ್ತು ಪಕ್ಷದ ಪರವಾಗಿ ಕೆಲಸ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯ ಸೋಲಿನ ನಂತರ ಸರ್ಕಾರಕ್ಕೆ ಆತಂಕ ಶುರುವಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಡೆದ ಎಲ್ಲಾ ಉಪಚುನಾವಣೆಗಳಲ್ಲೂ ನಾವು ಗೆದ್ದಿದ್ದೇವೆ. ಈಗಿನ ಫಲಿತಾಂಶದಲ್ಲಿ ಆತಂಕಪಡುವಂತಹ ಸೋಲು ಏನಿಲ್ಲ. ನಾಲ್ಕು ಸ್ಥಾನಗಳಲ್ಲಿ ವಿಪಕ್ಷದವರು ಮೂರು ಗೆದ್ದಿದ್ದರೆ, ನಾವು ಒಂದು ಸ್ಥಾನವನ್ನು ಗೆದ್ದಿದ್ದೇವೆ. ಕೇವಲ ಒಂದು ಸೀಟು ಕಳೆದುಕೊಂಡಿದ್ದೇವೆ ಅಷ್ಟೇ, ಇದನ್ನು ದೊಡ್ಡ ಸೋಲು ಎನ್ನಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು, ಮಹಾದೇವಪ್ಪ ಅವರಿಗಿರುವ ಇರುಸುಮುರುಸು ಸರಿಹೋಗಲು ಸ್ವಲ್ಪ ದಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
