ಬೆಂಗಳೂರಿನಲ್ಲಿ ನಡೆದ ‘ಮಿನಿ ಸ್ಟೇಟ್ ಒಲಿಂಪಿಕ್ ಗೇಮ್ಸ್-2026’ ಕ್ರೀಡಾಕೂಟದ ಜೂಡೋ ವಿಭಾಗದಲ್ಲಿ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳೊಂದಿಗೆ ಒಟ್ಟು 9 ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕೀರ್ತಿ ತಂದಿದ್ದಾರೆ.

ಬೆಂಗಳೂರಿನಲ್ಲಿ ಜರುಗಿದ 2026ನೇ ಸಾಲಿನ ಮಿನಿ ಸ್ಟೇಟ್ ಒಲಿಂಪಿಕ್ ಗೇಮ್ಸ್ನ ಜೂಡೋ ಸ್ಪರ್ಧೆಯಲ್ಲಿ 45 ಕೆಜಿ ವಿಭಾಗದಲ್ಲಿ ಶ್ರೇಯಲ್ ಕೌರಿ ಚಿನ್ನದ ಪದಕ ಗೆದ್ದು ಮಿಂಚಿದ್ದಾರೆ. ಇನ್ನು 28 ಕೆಜಿ ವಿಭಾಗದಲ್ಲಿ ಆರಾಧ್ಯ ಪೂಜೇರಿ, 36 ಕೆಜಿ ವಿಭಾಗದಲ್ಲಿ ಕಾವೇರಿ ಸೂರ್ಯವಂಶಿ ಹಾಗೂ 40 ಕೆಜಿ ವಿಭಾಗದಲ್ಲಿ ತೇಜಸ್ ಕುಡನೂರ್ಕರ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತೆಯೇ 28 ಕೆಜಿ ವಿಭಾಗದಲ್ಲಿ ಲಾವಣ್ಯ ಘಸಾರಿ, 30 ಕೆಜಿ ವಿಭಾಗದಲ್ಲಿ ಪಾರ್ಥ ಶಿಂತ್ರೆ, 32 ಕೆಜಿ ವಿಭಾಗದಲ್ಲಿ ಫಿರ್ದೋಶ್ ಪೆಂಡಾರಿ, ಹಾಗೂ 35 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಯೂಸುಫ್ ಮತ್ತು ವಿಜಯಕುಮಾರ್ ನಿಲಜಗಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಜೂಡೋ ತರಬೇತುದಾರರಾದ ಕುತುಜಾ ಮುಲ್ತಾನಿ ಮತ್ತು ರೋಹಿಣಿ ಅವರ ಮಾರ್ಗದರ್ಶನದಲ್ಲಿ ಈ ಪಟುಗಳು ಒಟ್ಟು 9 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.

