ಸತತ ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ ಕ್ರೀಡಾ ಕ್ಷೇತ್ರದಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಬೆಳಗಾವಿಯ ಯುವ ಪ್ರತಿಭೆ ಅಯಾನ್ ಗೋಕಾಕಕರ್ ಸಾಕ್ಷಿಯಾಗಿದ್ದಾರೆ. ಐದು ವರ್ಷಗಳ ನಿರಂತರ ಕರಾಟೆ ಅಭ್ಯಾಸದ ಫಲವಾಗಿ ಅಯಾನ್ ಪ್ರತಿಷ್ಠಿತ ಬ್ಲ್ಯಾಕ್ ಬೆಲ್ಟ್ ಮುಡಿಗೇರಿಸಿಕೊಂಡಿದ್ದು, ಗಣ್ಯರಿಂದ ಸನ್ಮಾನಿತರಾಗಿದ್ದಾರೆ.

ಬೆಳಗಾವಿಯ ಆಟೋ ನಗರದ ಪ್ಯಾರಡೈಸ್ ಹಾಲ್‌ನಲ್ಲಿ ನವೆಂಬರ್ 14 ರಂದು ಬೆಳಗಾವಿ ಜಿಲ್ಲಾ ಮುಖ್ಯ ಪರೀಕ್ಷಕ ಗಜೇಂದ್ರ ಕಾಕತೀಕರ ಅವರ ಮಾರ್ಗದರ್ಶನದಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ನಡೆಯಿತು. ಇದರಲ್ಲಿ 50 ಕಲರ್ ಬೆಲ್ಟ್ ವಿದ್ಯಾರ್ಥಿಗಳು ಹಾಗೂ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಅಯಾನ್ ಗೋಕಾಕಕರ್ ಪಾಲ್ಗೊಂಡಿದ್ದರು. ಮಹಾಂತೇಶ ನಗರದಲ್ಲಿ ಕಳೆದ ಐದು ವರ್ಷಗಳಿಂದ ತರಬೇತುದಾರ ಪರಶುರಾಮ ಕಾಕತಿ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿರುವ ಅಯಾನ್, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಇವರ ಈ ಸಾಧನೆಗಾಗಿ ಇಂಡಿಯನ್ ಕರಾಟೆ ಕ್ಲಬ್ ಹಾಗೂ ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಗಜೇಂದ್ರ ಕಾಕತೀಕರ ಅವರು ಬ್ಲ್ಯಾಕ್ ಬೆಲ್ಟ್, ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಜೊತೆಗೆ ಅಯಾನ್ ಪೋಷಕರಾದ ಸುಲ್ತಾನ್ ಗೋಕಾಕಕರ್ ಹಾಗೂ ಹೀನಾಕೌಸರ್ ಗೋಕಾಕಕರ್ ದಂಪತಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಬೇದಾರ್ ಡಿ. ಹೆಂಬ್ರೋಮ್, ಮಹೇಶ ಕದಂ, ದೀಪಕ್ ಮುನ್ನೋಳಿ, ಗಂಗಾಧರ ಸೂರ್ಯವಂಶಿ, ಶಫಿ ಗೋಕಾಕಕರ್ ಹಾಗೂ ಮರಾಠಾ ಇನ್‌ಫೆಂಟ್ರಿಯ ಸುಬೇದಾರ್ ಮೇಜರ್ ಸಂದೀಪ ಖೋತ್ ಉಪಸ್ಥಿತರಿದ್ದರು. ಸಮಾರಂಭದ ಯಶಸ್ಸಿಗೆ ಮಹಿಳಾ ಮುಖ್ಯ ತರಬೇತುದಾರರಾದ ಹೇಮಲತಾ ಜಿ. ಕಾಕತೀಕರ ಹಾಗೂ ತರಬೇತುದಾರರಾದ ವಿಠ್ಠಲ ಭೋಜ್‌ಗರ್, ಪ್ರಭಾಕರ ಕಿಲ್ಲೇಕರ, ವಿಜಯ ಸುತಾರ, ನೀಲೇಶ ಗುರಖಾ, ನತಾಶಾ ಖಾನಾಪುರಕರ್, ಹರೀಶ ಸೋನಾರ, ವಿನಾಯಕ ದಾಂಡ್ಕರ್, ಸುಮಿತ್ ಕಾಕತೀಕರ, ಅಭಿಷೇಕ ಲೋಹಾರ, ಸಮೀರ್ ಸತ್ತಿಗೇರಿ, ಪಾರ್ಥ ಚೌಗುಲೆ, ಶಿವಂ ಮುನ್ನೋಳಿ ಮತ್ತು ಕಲ್ಯಾಣಿ ತಹಶೀಲ್ದಾರ್ ಶ್ರಮಿಸಿದರು. ಪಿಂಟು ಪಾಖರೆ ಕಾರ್ಯಕ್ರಮ ನಿರೂಪಿಸಿದರು.
