ದೇಶದ ಅನ್ನದಾತರ ಹಕ್ಕುಗಳಿಗಾಗಿ ಮತ್ತೊಂದು ಬೃಹತ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ, 29 ರಾಜ್ಯಗಳ ರೈತ ಸಂಘಟನೆಗಳು ಒಗ್ಗೂಡಿದ್ದು, ಈ ಹೋರಾಟಕ್ಕೆ ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಕೂಡ ಸಾಥ್ ನೀಡಿದ್ದಾರೆ.
ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ದೇಶಾದ್ಯಂತ ಜಾರಿಗೆ ತರಲು ಹಾಗೂ ರೈತ ಚಳವಳಿಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ರಾಜ್ಯ ರೈತ ರಾಷ್ಟ್ರೀಯ ಹಸಿರು ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರೇಮ್ ಚೌಗುಲಾ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಹೋರಾಟ ರೂಪಿಸಲಾಗಿದೆ. ಮಹಾರಾಷ್ಟ್ರದ ಶೇತಕರಿ ಸಂಘಟನೆಯ ರವಿಕಾಂತ್ ತುಪಕರ್ ಅವರ ಪಾದಯಾತ್ರೆಯ ನಡುವೆಯೇ, ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಅವರ ಸ್ವಗ್ರಾಮದಲ್ಲಿ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಲಾಯಿತು. ಸ್ವಾಮಿನಾಥನ್ ವರದಿ ಜಾರಿಯ ಹೋರಾಟಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಹಾಗೂ ಖುದ್ದು ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಅಣ್ಣಾ ಹಜಾರೆ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ಗೋವಾ, ತಮಿಳುನಾಡು, ದೆಹಲಿ ಸೇರಿದಂತೆ ದೇಶದ ಎಲ್ಲಾ 29 ರಾಜ್ಯಗಳ ರೈತ ಸಂಘಟನೆಗಳು ಮತ್ತು ಮುಖಂಡರನ್ನು ಒಂದೇ ವೇದಿಕೆಯಡಿ ತಂದು ಸಂಘಟಿತ ನಾಯಕತ್ವ ರೂಪಿಸಲಾಗುತ್ತಿದೆ. ರೈತರ ಹಕ್ಕು, ನ್ಯಾಯ ಮತ್ತು ಕಲ್ಯಾಣಕ್ಕಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ವಕೀಲರು, ಯುವಕರು, ವಿದ್ಯಾರ್ಥಿಗಳು ಹಾಗೂ ಮಾಜಿ ಸೈನಿಕರೂ ಕೈಜೋಡಿಸಿದ್ದಾರೆ. ಸ್ವಾಮಿನಾಥನ್ ವರದಿ ಸಂಪೂರ್ಣ ಜಾರಿಯಾಗುವವರೆಗೂ ದೆಹಲಿಯಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರೇಮ್ ಚೌಗುಲಾ ಎಚ್ಚರಿಕೆ ನೀಡಿದ್ದಾರೆ.
