Belagavi

ಚರಂಡಿ ಕುಸಿದು 6 ತಿಂಗಳಾದರೂ ಕಣ್ತೇರೆಯದ ಮಹಾನಗರ ಪಾಲಿಕೆ

Share

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವಂತ ಸಾಕ್ಷಿ ಸಿಕ್ಕಿದೆ. ಹಳೆ ಪಿ.ಬಿ. ರಸ್ತೆಯ ತಾನಾಜಿ ಗಲ್ಲಿ ಬ್ರಿಡ್ಜ್ ಕಾರ್ನರ್ ಬಳಿ ಚರಂಡಿ ಕುಸಿದು ಬರೋಬ್ಬರಿ ಆರು ತಿಂಗಳು ಕಳೆದರೂ ಪಾಲಿಕೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬೆಳಗಾವಿ ನಗರದ ಹಳೆ ಪಿ.ಬಿ. ರಸ್ತೆಯಲ್ಲಿರುವ ತಾನಾಜಿ ಗಲ್ಲಿ ಬ್ರಿಡ್ಜ್ ಕಾರ್ನರ್ ಬಳಿ ಚರಂಡಿ ಕಟ್ಟಡ ಕುಸಿದು ಬಿದ್ದಿದ್ದು, ಸ್ಥಳೀಯ ನಿವಾಸಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ. ನಗರದ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಚವ್ಹಾಣ್ ಗಲ್ಲಿ ಮತ್ತು ಕಾಮತ್ ಗಲ್ಲಿ ಭಾಗದ ಕೊಳಚೆ ನೀರು ಇದೇ ಮುಖ್ಯ ಚರಂಡಿಯ ಮೂಲಕ ಹರಿದು ಹೋಗುತ್ತದೆ. ಅಲ್ಲದೆ, ತಾನಾಜಿ ಗಲ್ಲಿಯಿಂದ ಬರುವ ಸಣ್ಣ ಚರಂಡಿಯೂ ಇದಕ್ಕೆ ಸಂಪರ್ಕ ಹೊಂದಿದ್ದು, ಸದ್ಯ ಎರಡೂ ಚರಂಡಿಗಳು ಕುಸಿದಿರುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ಸಂಪೂರ್ಣ ಬಂದ್ ಆಗುವ ಸ್ಥಿತಿಗೆ ತಲುಪಿದೆ. ಇದರಿಂದ ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ.

ಚರಂಡಿ ಕುಸಿದಿರುವ ಜಾಗದ ಪಕ್ಕದಲ್ಲೇ ಸಾರ್ವಜನಿಕ ಬಾವಿಯಿದ್ದು, ನೀರು ತರಲು ಹೋಗುವ ಸ್ಥಳೀಯರಿಗೆ ಓಡಾಡುವುದೇ ದುಸ್ತರವಾಗಿದೆ. ಇನ್ನೊಂದೆಡೆ, ಸಮೀಪದ ಅಂಗಡಿ ಮಾಲೀಕರು ತಮ್ಮ ಕಟ್ಟಡದ ಮೇಲಿನ ಮಹಡಿಗೆ ತೆರಳಲು ಸಾಧ್ಯವಾಗದೆ ಪರದಾಡುತ್ತಿದ್ದು, ಪಾಲಿಕೆಯವರು ಅಡ್ಡಲಾಗಿ ಅಳವಡಿಸಿರುವ ತಗಡಿನ ಶೀಟ್‌ಗಳು ಅವರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡುತ್ತಿವೆ. ವಿಶೇಷವೆಂದರೆ, ಆರು ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಪಾಲಿಕೆ ಎಂಜಿನಿಯರ್‌ಗಳು ಕೇವಲ ಎರಡೇ ದಿನಗಳಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆರು ತಿಂಗಳು ಉರುಳಿದರೂ ಒಬ್ಬನೇ ಒಬ್ಬ ಅಧಿಕಾರಿ ಇತ್ತ ಕಡೆ ಮುಖ ಮಾಡಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ನಾವು ಮಹಾನಗರ ಪಾಲಿಕೆಗೆ ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುತ್ತಿಲ್ಲವೇ? ತೆರಿಗೆ ವಸೂಲಿಯಲ್ಲಿ ತೋರುವ ಉತ್ಸಾಹವನ್ನು ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಾಲಿಕೆ ಏಕೆ ತೋರುತ್ತಿಲ್ಲ?” ಎಂದು ಸ್ಥಳೀಯ ನಾಗರಿಕರು ಆಕ್ರೋಶಭರಿತವಾಗಿ ಪ್ರಶ್ನಿಸುತ್ತಿದ್ದಾರೆ. ಇನ್ನಾದರೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಕುಸಿದಿರುವ ಎರಡೂ ಚರಂಡಿಗಳನ್ನು ಪರಿಶೀಲಿಸಿ ಬಾಕಿ ಉಳಿದಿರುವ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಪಾಲಿಕೆ ತನ್ನ ನಿರ್ಲಕ್ಷ್ಯವನ್ನು ಹೀಗೆಯೇ ಮುಂದುವರಿಸಿದರೆ, ಪಾಲಿಕೆ ಕಚೇರಿ ಎದುರು ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ಥಳೀಯ ನಿವಾಸಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!