Belagavi

ಬೆಳಗಾವಿ ಕೆ.ಎಲ್‌.ಇ ಸಂಸ್ಥೆಯಿಂದ ‘ವಿಜ್ಞಾನ ಪ್ರದರ್ಶನ-೨೦೨೬’ಕ್ಕೆ ಅದ್ಧೂರಿ ಚಾಲನೆ: 100ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಭಾಗಿ

Share

ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ ಬೃಹತ್ ವೇದಿಕೆ ಕಲ್ಪಿಸಿದೆ. ಇಂದು ಬೆಳಿಗ್ಗೆ ‘ಸೈನ್ಷಿಯಾ ವೆನಾರಿ-7.0’ ಹಾಗೂ ‘ಆರ್‌ಎಲ್‌ಎಸ್‌ಐ ಸೈಫೆಸ್ಟ್-2026’ ವಿಜ್ಞಾನ ಮಾದರಿ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ನೂರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ತಮ್ಮ ನಾವೀನ್ಯತಾ ಮಾದರಿಗಳೊಂದಿಗೆ ಗಮನ ಸೆಳೆದಿದ್ದಾರೆ.

ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆ (ಸ್ವಾಯತ್ತ) ಹಾಗೂ ರಾಜಾ ಲಖಮಗೌಡ ಪಿ.ಯು. ವಿಜ್ಞಾನ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ‘ವಿಜ್ಞಾನ ಪ್ರದರ್ಶನ-೨೦೨೬’ ಇಂದು ಅಧಿಕೃತವಾಗಿ ಆರಂಭವಾಯಿತು. ಕಾಲೇಜಿನ ಸಿ.ವಿ. ರಾಮನ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಶೈಕ್ಷಣಿಕ ಡೀನ್ ಡಾ. ನರಸಿಂಹ ಅಯ್ಯಾಚಿತ್ ಉದ್ಘಾಟಿಸಿದರು. ಸುಮಾರು 100ಕ್ಕೂ ಹೆಚ್ಚು ಶಾಲೆಗಳ ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಕೆ.ಎಲ್.ಇ. ಸೊಸೈಟಿ ನಿರ್ದೇಶಕ ಮಹಾಂತೇಶ ಎಂ. ಕವಟಗಿಮಠ ಮಾತನಾಡಿ, ವಿಜ್ಞಾನವು ಸಮಾಜದ ಒಳಿತಿಗಾಗಿ ಬಳಕೆಯಾಗಬೇಕು ಎಂದರು. ಸುನಾಮಿ ಮುನ್ಸೂಚನೆ, ಎಲ್ ನಿನೋ ಕುರಿತು ರೈತರಿಗೆ ಮಾಹಿತಿ ನೀಡುವುದು ಹಾಗೂ ಕೋವಿಡ್ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳು ದೇಶೀಯ ಲಸಿಕೆ ತಯಾರಿಸಿ ಜಗತ್ತನ್ನೇ ಉಳಿಸಿದ ಸಾಧನೆಯನ್ನು ಅವರು ಸ್ಮರಿಸಿದರು. ಗ್ರಾಮೀಣ ಭಾಗದ ಬಡ ಮಕ್ಕಳ ಪ್ರತಿಭೆಯೂ ವಿಶ್ವಮಟ್ಟದಲ್ಲಿ ಮಿಂಚಬೇಕು ಮತ್ತು ಬೆಳಗಾವಿ ನೆಲದಿಂದ ಎಡಿಸನ್, ರೈಟ್ ಸಹೋದರರಂತಹ ಮಹಾನ್ ವಿಜ್ಞಾನಿಗಳು ಹೊರಹೊಮ್ಮಲಿ ಎಂದು ಅವರು ಆಶಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಲಿಂಗೌಡ ವಿ. ದೇಸಾಯಿ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯ ಗಿರೀಶ್ ಕತ್ತಿ, ಆರ್‌ಎಲ್‌ಎಸ್ ವಿಜ್ಞಾನ ಸಂಸ್ಥೆಯ ಪ್ರಾಚಾರ್ಯ ಡಾ. ಜೆ.ಎಸ್. ಕಾವಳೇಕರ್ ಹಾಗೂ ಆರ್‌ಎಲ್ ಪಿಯು ಕಾಲೇಜಿನ ಪ್ರಾಚಾರ್ಯ ವಿ.ಸಿ. ಕಾಮಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ.

Tags:

error: Content is protected !!