ಶ್ರವಣಬೆಳಗೊಳದ ಪ.ಪೂ.ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತೀ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಇಂದು ನವೆಂಬರ್ 15 ರಂದು ಬೆಳಗಾವಿ ಮಹಾನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಹಿನ್ನಲೆಯಲ್ಲಿ ಶ್ರೀಗಳಿಗೆ ಸಕಲ ಜೈನ ಸಮಾಜದ ವತಿಯಿಂದ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ರವಿವಾರ ಮಧ್ಯಾಹ್ನ 4 ಗಂಟೆಗೆ ಬೆಳಗಾವಿ ನಗರದ ಹಳೆ ಪಿ. ಬಿ.ರಸ್ತೆಯಲ್ಲಿನ ಪ್ಯಾಟಸನ್ ಸಂಸ್ಥೆಯ ಬಳಿ ಭಟ್ಟಾರಕ ಶ್ರೀಗಳಿಗೆ ಭವ್ಯವಾದ ಸ್ವಾಗತ ಕೋರಿ ಅವರನ್ನು ಬರಮಾಡಿಕೊಳ್ಳಲಾಯಿತು.

ಪ್ರಾರಂಭದಲ್ಲಿ ಜೈನ ಸಮಾಜದ ಮುಖಂಡ ಭರತ ಪಾಟೀಲ , ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ದಂಪತಿಗಳು, ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು. ಶಾಸಕ ಸಂಜಯ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಪುಷ್ಪಕ ಹಣಮಣ್ಣವರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಪ್ರಮೋದ ಪಾಟೀಲ ಸೇರಿದಂತೆ ಸಮಾಜದ ಗಣ್ಯರು ಭಟ್ಟಾರಕ ಶ್ರೀಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗಳಿಗೆ ತಮ್ಮ ಸಮರ್ಪಣಾ ಭಾವ ವ್ಯಕ್ತಪಡಿಸಿದರು.
ತದ ನಂತರ ಶ್ರೀಗಳು ಸುಶೋಭಿತ ರಥದಲ್ಲಿ ಆಸೀನರಾದ ನಂತರ ಭವ್ಯವಾದ ಮೆರವಣಿಗೆಯ ಮೂಲಕ ಅವರನ್ನು ಬೆಳಗಾವಿ ನಗರಕ್ಕೆ ಬರಮಾಡಿಕೊಳ್ಳಲಾಯಿತು.
ಈ ಮೆರವಣಿಗೆಯಲ್ಲಿ ಬೆಳಗಾವಿ ನಗರ ಮತ್ತು ಸುತ್ತ ಮುತ್ತಲಿನ ವಿವಿಧ ಉಪನಗರಗಳಲ್ಲಿನ ಸುಮಾರು 33 ಮಹಿಳಾ ಮಂಡಳಗಳ ಸದಸ್ಯರು ಧಾರ್ಮಿಕ ಘೋಷ್ಯವಾಕ್ಯಗಳೊಂದಿಗೆ ಹಾಗೂ ಭಟ್ಟಾರಕ ಶ್ರೀಗಳಿಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು.
ಕುದುರೆ, ವಿವಿಧ ವಾದ್ಯ ಮೇಳಗಳು, ಲೇಜಿಮ ,ಕೋಲಾಟ ತಂಡಗಳು ನೋಡುಗರ ಮನಸೆಳೆದವು.
ಹಳೆ ಪಿ.ಬಿ.ರಸ್ತೆಯಿಂದ ಪ್ರಾರಂಭಗೊಂಡ ಮೆರವಣಿಗೆಯುಬಹೊಸುರ ಬಸವಣ ಗಲ್ಲಿ, ಶಹಾಪೂರ ಕೋರೆ ಗಲ್ಲಿ, ಗೋವಾವೇಸ , ಮಹಾವೀರ ಭವನ , ಹಿಂದವಾಡಿ ಮೂಲಕ ಗೋಮಟೇಶ ವಿದ್ಯಾಪೀಠಕ್ಕೆ ತಲುಪಿತು.
ಗೋಮಟೇಶ ವಿದ್ಯಾಪೀಠದಲ್ಲಿ ಕಾಣಿಕೆ ಅರ್ಪಣೆ, ಅತಿಥಿಗಳ ಸನ್ಮಾನ ಕಾರ್ಯಕ್ರಮಗಳು ನಡೆದವು.
