ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ರಾಷ್ಟ್ರೀಯ ಪಕ್ಷಿ ನವಿಲಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸುವ ಮೂಲಕ ಸರ್ವಲೋಕಾ ಸೇವಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಮಾನವೀಯತೆ ಮೆರೆದಿದ್ದಾರೆ.

ಸೋಮವಾರ ಮುಂಜಾನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನವಿಲು ಮೃತಪಟ್ಟಿತ್ತು. ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ವೀರೇಶ ಹಿರೇಮಠ ಅವರು, ವಿಳಂಬ ಮಾಡದೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಸಂಪರ್ಕಿಸಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಅಣ್ಣಪ್ಪ ಹಾಗೂ ವಿಜಯ ಅವರು ಮೃತಪಟ್ಟ ರಾಷ್ಟ್ರೀಯ ಪಕ್ಷಿ ನವಿಲಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದರು. ಬಳಿಕ ಅರಣ್ಯ ಇಲಾಖೆಯ ವತಿಯಿಂದ ಗೌರವಯುತವಾಗಿ ಅಂತಿಮ ವಿಧಿವಿಧಾನ ನೆರವೇರಿಸಲು ಮುಂದಾದರು.
