ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸದಾಶಿವನಗರದ ತಮ್ಮ ಖಾಸಗಿ ನಿವಾಸದಿಂದ ಕುಮಾರಕೃಪ ಅತಿಥಿ ಗೃಹದ ಬಳಿಯ ನವೀಕರಿಸಲಾದ ಹೊಸ ಸರ್ಕಾರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದಾರೆ. ಹೊಸ ಮನೆಗೆ ‘ಗಂಗಾ’ ಎಂದು ನಾಮಕರಣ ಮಾಡಲಾಗಿದ್ದು, ವಿಪಕ್ಷಗಳ ದುಬಾರಿ ವೆಚ್ಚದ ಟೀಕೆಗೆ ಸಿಎಂ ಖಡಕ್ ತಿರುಗೇಟು ನೀಡಿದ್ದಾರೆ.
ಕುಮಾರಕೃಪ ಅತಿಥಿ ಗೃಹದ ಬಳಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಯಾವುದೇ ವಿಶೇಷ ಆಹ್ವಾನಿತರಿಲ್ಲದೆ ಕೇವಲ ಕುಟುಂಬದವರೊಂದಿಗೆ ಖಾಸಗಿ ಪೂಜೆ ನೆರವೇರಿಸಿ ಹೊಸ ನಿವಾಸಕ್ಕೆ ಪ್ರವೇಶಿಸಿರುವುದಾಗಿ ತಿಳಿಸಿದರು. ಈ ಹೊಸ ನಿವಾಸಕ್ಕೆ ‘ಗಂಗಾ’ ಎಂದು ಹೆಸರಿಡಲಾಗಿದ್ದು, ಒಳಗಿನ ಕೊಠಡಿಗಳಿಗೆ ರಾಜ್ಯದ ನದಿಗಳ ಹೆಸರನ್ನು ಇಡಲಾಗಿದೆ. ಬರುವ ಗುರುವಾರ ರಾಜ್ಯದ ಎಲ್ಲಾ 224 ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರನ್ನು ಆಹ್ವಾನಿಸಲಾಗಿದ್ದು, ಅಂದಿನಿಂದ ಅಧಿಕೃತವಾಗಿ ಭೇಟಿ ಆರಂಭವಾಗಲಿದೆ. ಸಾರ್ವಜನಿಕರ ಭೇಟಿಗಾಗಿ ಪಕ್ಕದಲ್ಲೇ ‘ಕೃಷ್ಣ’ ಹೋಮ್ ಆಫೀಸ್ ಇರಲಿದ್ದು, ತುರ್ತು ಸಭೆಗಳಿಗಾಗಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಿವಾಸದ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಪಾರಂಪರಿಕ ಕಟ್ಟಡದ ಶೇ.10ರಷ್ಟು ಭಾಗವನ್ನು ಮಾತ್ರ ಉಳಿಸಿಕೊಂಡು ನವೀಕರಿಸಲಾಗಿದೆ ಎಂದರು. ಮನೆಯಲ್ಲಿ ಬಳಸಿರುವ ಶೇ.80 ರಿಂದ 90ರಷ್ಟು ಪೀಠೋಪಕರಣಗಳು ತಮ್ಮ ಹಳೆಯ ಮನೆಯವು ಹಾಗೂ ಹಿಂದೆ ಕುಮಾರಕೃಪದಲ್ಲಿದ್ದವೇ ಆಗಿವೆ. ನೆಲಹಾಸಿಗೆ ಕೇವಲ 60 ರೂ. ಬೆಲೆಯ ಕೋಟಾ ಕಲ್ಲು ಮತ್ತು 80 ರೂ. ಬೆಲೆಯ ಗ್ರಾನೈಟ್ ಬಳಸಲಾಗಿದೆ ಎಂದು ಸ್ಪಷ್ಟಪಡಿಸಿದರು. “ವಿಪಕ್ಷದವರು ಟೀಕೆ ಮಾಡುವುದೇ ಅವರ ಕೆಲಸ, ಅವರನ್ನೂ ಆಹ್ವಾನಿಸುತ್ತೇನೆ ಬಂದು ನೋಡಲಿ” ಎಂದು ತಿರುಗೇಟು ನೀಡಿದ ಅವರು, ನಿಗದಿತ ಕಾರ್ಯಕ್ರಮಗಳ ನಿಮಿತ್ತ ದೆಹಲಿಗೆ ತೆರಳಿ ರಾತ್ರಿಯೊಳಗೆ ಬೆಂಗಳೂರಿಗೆ ವಾಪಸಾಗುವುದಾಗಿ ತಿಳಿಸಿದರು.
