State

ಜನರ ಬದುಕಿನಲ್ಲಿ ಬದಲಾವಣೆ, ಯುವಜನತೆಗೆ ಅವಕಾಶ ಸೃಷ್ಟಿಸುವುದೇ ನಮ್ಮ ಗುರಿ: ಸಿಎಂ ಡಿ.ಕೆ. ಶಿವಕುಮಾರ್

Share

“ಕಟ್ಟಡಗಳ ನಿರ್ಮಾಣದ ಜೊತೆಗೆ, ಜನರ ಬದುಕಿನಲ್ಲಿ ಬದಲಾವಣೆ ತರುವುದು ಮತ್ತು ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಅಭಿವೃದ್ಧಿ” ಎಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ಹೇಳಿದರು.

ಭಾರತೀನಗರ ಪೊಲೀಸ್ ಠಾಣೆ ಬಳಿ ಭಾನುವಾರ ಆಯೋಜಿಸಿದ್ದ ಭಾರತೀನಗರ ಹಬ್ಬದಲ್ಲಿ ಸಮುದಾಯ ಭವನ, ಮಾಡರ್ನ್ ಟೆಕ್ನೋ ಜಿಮ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.

“ಯುವಜನರು ದೇಶದ ದೊಡ್ಡ ಆಸ್ತಿ. ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಸಾಮಾಜಿಕ ಸಾಮರಸ್ಯ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗಿದೆ. ಜಿಮ್, ಕ್ರೀಡಾ ಚಟುವಟಿಕೆಗಳಿಗೆ ಬರುವ ಯುವಕರನ್ನೂ ಈ ಸಂಘಗಳ ಸದಸ್ಯರನ್ನಾಗಿ ಮಾಡಬೇಕು” ಎಂದು ಸೂಚಿಸಲಾಗಿದೆ ಎಂದರು.

ಶಿವಾಜಿನಗರ ಬೆಂಗಳೂರಿನ ಹೃದಯಭಾಗ

“ಶಿವಾಜಿನಗರ ಬೆಂಗಳೂರಿನ ಹೃದಯಭಾಗ. ಇಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ದೊಡ್ಡ ಆಸ್ತಿ. ನಮ್ಮ ಸರ್ಕಾರ, ಪಕ್ಷ ಹಾಗೂ ನಾಯಕರನ್ನು ಶಿವಾಜಿನಗರದ ಜನತೆ ಎಂದಿಗೂ ಕೈಬಿಟ್ಟಿಲ್ಲ. ಉಪಚುನಾವಣೆಯ ಸಂದರ್ಭದಲ್ಲಿ ಹಲವು ಶಾಸಕರು ಪಕ್ಷ ತೊರೆದರೂ ಶಿವಾಜಿನಗರ ಕ್ಷೇತ್ರದ ಜನತೆ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದರು. ಜಾತಿ, ಧರ್ಮ, ಭಾಷೆಗಳು ಬೇರೆ ಇರಬಹುದು. ಆದರೆ ನಮ್ಮೆಲ್ಲರ ಹೃದಯ ಒಂದೇ” ಎಂದರು.

“ಭಾರತ್ ಜೋಡೋ ಯುವ ಸಂಘಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರತಿ ವಾರ್ಡ್‌ನಲ್ಲೂ 200ಕ್ಕೂ ಹೆಚ್ಚು ಸದಸ್ಯರು ಸೇರ್ಪಡೆಯಾಗಿದ್ದಾರೆ. 16ರಿಂದ 35 ವರ್ಷದ ಯುವಕರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡಿ ಸಂವಾದ ನಡೆಸುವ ಉದ್ದೇಶವಿದೆ. ಇದಕ್ಕಾಗಿ ಭಾರತೀನಗರದಲ್ಲೇ ಯುವಕರ ಸಭೆ ಆಯೋಜಿಸುವಂತೆ ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಸೂಚಿಸುವುದಾಗಿ” ತಿಳಿಸಿದರು.

“ಸಚಿವ ರಿಜ್ವಾನ್ ಅರ್ಷದ್ ಅವರು ಕ್ಷೇತ್ರದ ಯುವಕರಿಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತಿದ್ದಾರೆ. ಸಾಮಾನ್ಯ ಜನರು ಮದುವೆ, ಮುಂಜಿ, ನಾಮಕರಣ ಸೇರಿದಂತೆ ಕುಟುಂಬದ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಖಾಸಗಿ ಸಮುದಾಯ ಭವನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಿ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಲಾಗಿದೆ. ಜಿಮ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ಯುವಕರ ಆರೋಗ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಅಭಿವೃದ್ಧಿಯೂ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರಿನಿಂದ ಸಂಗ್ರಹವಾಗುವ ತೆರಿಗೆ ಆದಾಯದ ದೊಡ್ಡ ಪಾಲು ರಾಜ್ಯದ ಇತರ ಭಾಗಗಳಿಗೆ ಹಂಚಿಕೆಯಾಗುತ್ತದೆ. ಜನರಿಗೂ ಸೂಕ್ತ ಸೌಲಭ್ಯ ಮತ್ತು ಪ್ರೋತ್ಸಾಹ ನೀಡಬೇಕಿದೆ” ಎಂದರು.

“ಗ್ರಾಮೀಣಾಭಿವೃದ್ಧಿಗೆ ಪಂಚಾಯಿತಿಗಳ ಮೂಲಕ ಅನುದಾನ ಮೀಸಲಿಡಲಾಗಿದೆ. ರಾಜ್ಯದ ರಸ್ತೆಗಳ ಅಭಿವೃದ್ಧಿಗೆ 20 ಸಾವಿರದಿಂದ ₹25 ಸಾವಿರ ಕೋಟಿ ಹಾಗೂ ನಗರಸಭೆ ಮತ್ತು ಪುರಸಭೆಗಳ ಅಭಿವೃದ್ಧಿಗೆ ಮುಂದಿನ ಒಂದು ವರ್ಷದಲ್ಲಿ 10 ಸಾವಿರ ಕೋಟಿ ರೂ. ವೆಚ್ಚ ಮಾಡುವ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಿಂದ ಬರುವ ಆದಾಯವನ್ನು ಇಡೀ ರಾಜ್ಯದ ಅಭಿವೃದ್ಧಿಗೆ ಹಂಚಿಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

“ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.40 ಕೋಟಿಗೆ ತಲುಪಿದ್ದು, ಸಂಚಾರ ದಟ್ಟಣೆ ದೊಡ್ಡ ಸವಾಲಾಗಿದೆ. ಕಿರಿದಾದ ರಸ್ತೆಗಳು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಕಟ್ಟಡಗಳ ತೆರವು ವಿಚಾರದಲ್ಲಿನ ಕಾನೂನು ತೊಡಕುಗಳಿಂದ ರಸ್ತೆ ಅಗಲೀಕರಣ ಸುಲಭವಲ್ಲ. ಒಂದು ಕಟ್ಟಡ ತೆರವು ವಿಚಾರ ನ್ಯಾಯಾಲಯಕ್ಕೆ ಹೋದರೆ ವರ್ಷಗಟ್ಟಲೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ನಗರದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಲವು ಚಿಂತನೆಗಳನ್ನು ನಡೆಸುತ್ತಿದೆ” ಎಂದರು.

ಬೆಂಗಳೂರಿನ ಹೊಸ ಪಾಲಿಕೆಗಳಿಂದ ಹೊಸ ನಾಯಕತ್ವ ಸೃಷ್ಟಿ

“ಬೆಂಗಳೂರು ನಗರವನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಂಗಡಿಸುವ ಪ್ರಕ್ರಿಯೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಸಂಬಂಧ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಮಸೂದೆಗೆ ಒಪ್ಪಿಗೆ ದೊರೆತಿದ್ದು, ರಾಜ್ಯಪಾಲರ ಸಹಿಯೊಂದಿಗೆ ಅಧಿಸೂಚನೆಯೂ ಹೊರಬಿದ್ದಿದೆ. ಹೊಸ ವ್ಯವಸ್ಥೆಯಡಿ ಚುನಾವಣೆ ನಡೆಸಲು ನ್ಯಾಯಾಲಯದ ಅನುಮತಿ ಕೋರಲಾಗಿದೆ. ಅನುಮತಿ ದೊರೆತ ತಕ್ಷಣ ಚುನಾವಣೆ ನಡೆಸಿ, ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ 369 ಹೊಸ ನಾಯಕರನ್ನು ಬೆಳೆಸುವ ಉದ್ದೇಶವಿದೆ” ಎಂದು ತಿಳಿಸಿದರು.

ಬೆಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಆದ್ಯತೆ ನೀಡಿದೆ. ಅಪರಾಧ ಚಟುವಟಿಕೆ, ರೌಡಿಸಂ ಮತ್ತು ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾತ್ರಿ 12 ಗಂಟೆ ಅಥವಾ ಎರಡು ಗಂಟೆಯಾದರೂ ಜನರು ಭಯವಿಲ್ಲದೆ ಗೌರವಯುತವಾಗಿ ಓಡಾಡುವ ವಾತಾವರಣ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಇಲಾಖೆಯೊಂದನ್ನು ರಚಿಸುವ ಕುರಿತು ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ” ಎಂದರು.

ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ನಿವಾಸಿಗಳ ಮಾಹಿತಿ ಸಂಗ್ರಹ

“ನಗರದಲ್ಲಿ ವಾಸಿಸುವ ಜನರ ಸುರಕ್ಷತೆಯ ದೃಷ್ಟಿಯಿಂದ ಮನೆಮನೆಗಳಲ್ಲಿರುವ ನಿವಾಸಿಗಳ ವಿವರಗಳನ್ನು ಸಂಗ್ರಹಿಸುವ ಅಗತ್ಯವಿದೆ. ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ 51 ಲಕ್ಷದಷ್ಟಿದ್ದ ಸಂಖ್ಯೆ 45 ಲಕ್ಷದಷ್ಟು ಕಡಿಮೆಯಾಗಿರುವ ವಿಚಾರವೂ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಯಾರು ಎಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಯಲ್ಲೂ ಲಭ್ಯವಿರುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು” ಎಂದು ಹೇಳಿದರು.

“ನಿರುದ್ಯೋಗಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಬೀದಿಬದಿ ವ್ಯಾಪಾರಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಸುಮಾರು 30 ಸಾವಿರ ಮಂದಿಯನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 1,500 ಮಂದಿಗೆ ವಾಹನಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸುಮಾರು 352 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಸುಮಾರು 15ರಿಂದ 17 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಸಿದ್ಧತೆ ನಡೆದಿದೆ” ಎಂದು ತಿಳಿಸಿದರು.

“ಎಥೆನಾಲ್ ಮಿಶ್ರಣದಿಂದ ವಾಹನಗಳಿಗೆ ಆಗಿರುವ ತೊಂದರೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಿದೆ. ವಾಹನಗಳ ಇಂಜಿನ್ ಹಾನಿ, ಮೈಲೇಜ್ ಕಡಿಮೆಯಾಗಿರುವುದು ಸೇರಿದಂತೆ ಗ್ರಾಹಕರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿಲ್ಲ” ಎಂದು ಟೀಕಿಸಿದರು.

“ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನಸ್ನೇಹಿಯಾಗಿಲ್ಲ. ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿದರೆ ರಾಜ್ಯವೂ ಬೆಲೆ ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ” ಎಂದರು.

“ಬೆಂಗಳೂರು ಎಲ್ಲ ಧರ್ಮ, ಸಮುದಾಯಗಳ ಜನರು ನೆಮ್ಮದಿಯಿಂದ ಬದುಕುವ ನಗರವಾಗಬೇಕು. ಹಿಂದೂ, ಕ್ರೈಸ್ತ, ಸಿಖ್, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದವರಿಗೂ ಸಂವಿಧಾನದ ಅಡಿಯಲ್ಲಿ ಸಮಾನ ರಕ್ಷಣೆ ನೀಡುವುದು ಸರ್ಕಾರದ ಬದ್ಧತೆ. ಕನ್ನಡದ ಭಾವನೆ ಮತ್ತು ಎಲ್ಲ ಜನರ ಬದುಕನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಲಿದೆ. ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶ ನೀಡದೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲಾಗುವುದು” ಎಂದು ಹೇಳಿದರು.

“ಸಚಿವ ರಿಜ್ವಾನ್ ಅರ್ಷದ್ ಅವರು ಉತ್ತಮ ಅನುಭವ ಹೊಂದಿದ್ದು, ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ. ಯುವಕರೊಂದಿಗೆ ಆತ್ಮೀಯವಾಗಿ ಬೆರೆತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ” ಎಂದು ಭರವಸೆ ನೀಡಿದರು.

Tags:

error: Content is protected !!