Belagavi

ಬೆಳಗಾವಿ ದಕ್ಷಿಣದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ

Share

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗೆ ಶಾಸಕ ಅಭಯ್ ಪಾಟೀಲ್ ಬಲವಾದ ಅಡಿಪಾಯ ಹಾಕಿದ್ದಾರೆ. ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಗೃಹ ಉದ್ಯೋಗಗಳಿಗೆ ಪ್ರೋತ್ಸಾಹ ನೀಡಲು ಬೃಹತ್ ಯೋಜನೆಗಳನ್ನು ರೂಪಿಸಲಾಗಿದೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಅವರು ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ, ಒಟ್ಟು 153 ಅರ್ಹ ಮಹಿಳಾ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಮಹಿಳೆಯರು ಆರ್ಥಿಕವಾಗಿ ಪರಾವಲಂಬನೆಯನ್ನು ತೊರೆದು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕೆಂಬ ಸದುದ್ದೇಶದಿಂದ ಕಳೆದ ಮೂರು ಆರ್ಥಿಕ ವರ್ಷಗಳ (2023-24, 2024-25, 2025-26) ಅವಧಿಯಲ್ಲಿ ಈ ಬೃಹತ್ ಯಂತ್ರ ವಿತರಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.


ಕೇವಲ ಯಂತ್ರೋಪಕರಣಗಳನ್ನು ವಿತರಿಸಿ ಕೈತೊಳೆಯದೆ, ಫಲಾನುಭವಿ ಮಹಿಳೆಯರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಮತ್ತು ಅವರ ಉದ್ಯೋಗಗಳಿಗೆ ಅಗತ್ಯವಿರುವ ಸತತ ಆರ್ಡರ್‌ಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿಯೂ ಸ್ಥಳೀಯ ಆಡಳಿತದ ವತಿಯಿಂದ ಪ್ರಾಮಾಣಿಕ ಹಾಗೂ ಗಂಭೀರ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಹಲವಾರು ನೂತನ ಗೃಹ ಉದ್ಯೋಗ ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಹೊಲಿಗೆ ಯಂತ್ರಗಳ ವಿತರಣೆಯ ಜೊತೆಗೆ ಶಾವಿಗೆ ತಯಾರಿಕಾ ಯಂತ್ರಗಳು, ಸಣ್ಣ ಪ್ರಮಾಣದ ಇಟ್ಟಿಗೆ ಗಿರಣಿ ಘಟಕಗಳು ಹಾಗೂ ಸ್ವಾವಲಂಬಿ ಜ್ಯೂಸ್ ಸೆಂಟರ್‌ಗಳನ್ನು ಆರಂಭಿಸಲು ಹೆಣ್ಣುಮಕ್ಕಳಿಗೆ ವಿಶೇಷ ಆರ್ಥಿಕ ನೆರವು ಹಾಗೂ ತಾಂತ್ರಿಕ ಮಾರ್ಗದರ್ಶನ ನೀಡಲಾಗುವುದು. ವಿಶೇಷವಾಗಿ, ಮುಂಬರುವ ದಿನಗಳಲ್ಲಿ ಸುಮಾರು 100 ಎಲೆಕ್ಟ್ರಾನಿಕ್ ಜ್ಯೂಸ್ ಸೆಂಟರ್‌ಗಳನ್ನು (ಎಳನೀರು, ಕಬ್ಬಿನ ಹಾಲು ಹಾಗೂ ಚಹಾ ಘಟಕಗಳು) ಸ್ಥಾಪಿಸಲು ಬೃಹತ್ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಶೇಕಡಾ 0% ಬಡ್ಡಿ ದರದಲ್ಲಿ ಸಂಪೂರ್ಣ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಯಾವುದೇ ಹೆಚ್ಚುವರಿ ಬಡ್ಡಿಯ ಹೊರೆಯಿಲ್ಲದೆ, ಕೇವಲ ಮೂಲ ಬೆಲೆಯನ್ನು ಮಾತ್ರ ಬ್ಯಾಂಕಿಗೆ ಮರುಪಾವತಿಸುವಂತಹ ಜನಪರ ವ್ಯವಸ್ಥೆಯನ್ನು ರೂಪಿಸುವ ಮೂಲಕ ಮಹಿಳಾ ಸಬಲೀಕರಣದ ಕನಸನ್ನು ನೈಜ ರೂಪದಲ್ಲಿ ಸಾಕಾರಗೊಳಿಸಲಾಗುತ್ತಿದೆ ಎಂದು ಶಾಸಕ ಅಭಯ್ ಪಾಟೀಲ್ ತಿಳಿಸಿದ್ದಾರೆ.
ಈ ವೇಳೆ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸೇವಕರು ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!