State

ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿಗೆ ಕಾಗವಾಡದ ಜ್ಯೋತಿಕುಮಾರ ಪಾಟೀಲ ನಾಮನಿರ್ದೇಶನ

Share

ಕಾಂಗ್ರೆಸ್ ಪಕ್ಷವು ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತನ ಸೇವೆಯನ್ನು ಗುರುತಿಸಿ ಸೂಕ್ತ ಸ್ಥಾನಮಾನ ಹಾಗೂ ಜವಾಬ್ದಾರಿ ನೀಡುವ ಪರಂಪರೆ ಹೊಂದಿದೆ. ಅದರಂತೆ ಕಾಗವಾಡದ ಜ್ಯೋತಿಕುಮಾರ ಸಿದ್ದಗೌಡ ಪಾಟೀಲ ಅವರನ್ನು ಸುಕ್ಷೇತ್ರ ಸೌದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಯಲ್ಲಮ್ಮ ದೇವಿಯ ಕೃಪೆಯಿಂದ ದೇವಿಯ ಸೇವೆ ಮಾಡುವ ಅವಕಾಶ ಅವರಿಗೆ ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದು ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದರು.

ಗುರುವಾರ ಉಗಾರ ಗ್ರಾಮದ ಶಾಸಕರ ಕಚೇರಿಯಲ್ಲಿ ಜ್ಯೋತಿಕುಮಾರ ಪಾಟೀಲ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಅವರ ತಂದೆ ಸಿದ್ದಗೌಡ ಪಾಟೀಲ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಂತರ ಪುತ್ರ ಜ್ಯೋತಿಕುಮಾರ ಪಾಟೀಲ ಕೂಡ ಪಕ್ಷದ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪಕ್ಷನಿಷ್ಠೆ ಮತ್ತು ಸೇವೆಯನ್ನು ಗುರುತಿಸಿರುವ ಮುಖ್ಯಮಂತ್ರಿಗಳು ಅವರಿಗೆ ಮಹತ್ವದ ಜವಾಬ್ದಾರಿ ನೀಡಿದ್ದಾರೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ಐನಾಪುರದ ವಿಶ್ವನಾಥ ನಾಮದಾರ ಗುರುಗಳು ಮಾತನಾಡಿ, ಕಾಂಗ್ರೆಸ್ ಸರ್ಕಾರವು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಪಕ್ಷವಾಗಿದೆ. ಇದಕ್ಕೆ ಜ್ಯೋತಿಕುಮಾರ ಪಾಟೀಲ ಅವರ ಆಯ್ಕೆಯೇ ಸಾಕ್ಷಿಯಾಗಿದೆ. ಈ ನೇಮಕಾತಿಗಾಗಿ ರಾಜ್ಯ ಸರ್ಕಾರ ಹಾಗೂ ಶಾಸಕ ರಾಜು ಕಾಗೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಸಮಾರಂಭದಲ್ಲಿ ಕಾಗವಾಡ ಪಿಕೆಪಿಎಸ್ ಅಧ್ಯಕ್ಷ ಕಾಕಾ ಪಾಟೀಲ, ಉಪಾಧ್ಯಕ್ಷ ಪದ್ಮಾಕರ ಕರವ, ಸುಧೀರ ಕರವ, ರಮೇಶ ಚೌಗುಲೆ, ಪ್ರಕಾಶ ಪಾಟೀಲ, ಚಿದಾನಂದ ಅವಟಿ, ಪವನ ಪಾಟೀಲ, ಉದಯ ಖೊಡೆ, ರಾಜು ಲಾಂಡಿಗೆ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುಕುಮಾರ್ ಬನ್ನೂರೆ
ಇನ ನ್ಯೂಸ ಕಾಗವಾಡ

Tags:

error: Content is protected !!