Chikkodi

ಸಿದ್ದೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಾಗರಮುನ್ನೊಳಿಯಲ್ಲಿ ಭವ್ಯ ಕುಸ್ತಿ ಪಂದ್ಯಾವಳಿ; ವಿವಿಧ ರಾಜ್ಯಗಳ ಪೈಲ್ವಾನರ ರೋಚಕ ಕಾದಾಟ

Share

ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಜಾತ್ರಾ ಕಮಿಟಿ ವತಿಯಿಂದ ಭವ್ಯ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಪ್ರತಿಷ್ಠಿತ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಿಂದ ಆಗಮಿಸಿದ್ದ ಖ್ಯಾತನಾಮ ಪೈಲ್ವಾನರು ಭಾಗವಹಿಸಿದ್ದರು. ಅಖಾಡದಲ್ಲಿ ಪೈಲ್ವಾನರು ಬದ್ಧವೈರಿಗಳಂತೆ ಸೆಣಸಾಡಿ, ತಮ್ಮ ಪಟ್ಟುಗಳ ಮೂಲಕ ನೆರೆದಿದ್ದ ಸಹಸ್ರಾರು ಕುಸ್ತಿ ಪ್ರೇಮಿಗಳನ್ನು ರೋಮಾಂಚನಗೊಳಿಸಿದರು. ಪಂದ್ಯಾವಳಿಯಲ್ಲಿ ವಿಜೇತರಾದ ಪೈಲ್ವಾನರಿಗೆ ಲಕ್ಷಾಂತರ ರೂಪಾಯಿಗಳ ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಶಾಸಕ ದುರ್ಯೋಧನ ಐಹೊಳೆ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರು ಆಗಮಿಸಿ ಪೈಲ್ವಾನರ ಕೈ ಕುಲುಕುವ ಮೂಲಕ ಹುರಿದುಂಬಿಸಿದರು. ದೇಶಿ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮಸ್ಥರ ಈ ಪ್ರಯತ್ನ ಶ್ಲಾಘನೀಯ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಂದ್ಯಾವಳಿಯ ಆಯೋಜಕರಾದ ಸಿದ್ದಪ್ಪ ಮಯ್ರಾಯಿ, ವಿರುಪಾಕ್ಷಿ ಈಟಿ ಹಾಗೂ ಶಿವಪುತ್ರ ಮನಗೂಳಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರಾಮಹೋತ್ಸವದ ಪ್ರಯುಕ್ತ ಉತ್ತರ ಭಾರತ ಸೇರಿದಂತೆ ವಿವಿಧ ರಾಜ್ಯಗಳ ಕುಸ್ತಿ ಪಟುಗಳನ್ನು ಆಹ್ವಾನಿಸಿ ಪಂದ್ಯಾವಳಿ ನಡೆಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಕ್ರೀಡಾಭಿಮಾನಿಗಳು ಆಗಮಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರು, ಯುವಕರು, ಜಾತ್ರಾ ಕಮಿಟಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಕುಸ್ತಿ ಅಭಿಮಾನಿಗಳು ಪಂದ್ಯಾವಳಿಗೆ ಸಾಕ್ಷಿಯಾದರು.

Tags:

error: Content is protected !!