ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೊಂದು ಹೆಜ್ಜೆ ಇಡಲಾಗಿದೆ.
ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹದಗೆಟ್ಟಿದ್ದ ಹೂಲಿಕಟ್ಟಿ ಗ್ರಾಮದ ರಸ್ತೆಯ ಅಭಿವೃದ್ಧಿಗೆ ಇದೀಗ ಕಾಲ ಕೂಡಿ ಬಂದಿದೆ.

ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಪ್ರಯತ್ನದಿಂದ ಬರೋಬ್ಬರಿ 2 ಕೋಟಿ 70 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಹೂಲಿಕಟ್ಟಿ ಗ್ರಾಮದಿಂದ ಕಿತ್ತೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕಾಮಗಾರಿ ಒಳ್ಳೆಯ ಗುತ್ತಿಗೆದಾರರಿಗೆ ನೀಡಿದ್ದು ರಸ್ತೆ ಅಭಿವೃದ್ಧಿ ಗುಣಮಟ್ಟದಿಂದ ನಡೆಯಲಿದೆ ಎಂಬ ವಿಶ್ವಾಸವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.ನಮ್ಮೂರಿನ ರಸ್ತೆ ಸಾಕಷ್ಟು ವರ್ಷಗಳಿಂದ ಹದಗೆಟ್ಟಿತ್ತು. ಈ ಹಿಂದೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಆದರೆ ಈಗಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರ ಗಮನಕ್ಕೆ ತಂದ ತಕ್ಷಣ ನಮ್ಮ ಸಮಸ್ಯೆಗೆ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದ್ದಾರೆ.

ನಮ್ಮ ಗ್ರಾಮದಿಂದ ಕಿತ್ತೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬೈಟ್ – ಶಾಸಕ ಬಾಬಾಸಾಹೇಬ್ ಪಾಟೀಲ
ಈ ಭಾಗದ ಜನರ ಬಹುದಿನಗಳ ಪ್ರಮುಖ ಸಮಸ್ಯೆ ರಸ್ತೆ ಅಭಿವೃದ್ಧಿಯಾಗಿತ್ತು. ಈ ಕುರಿತು ಸಾಕಷ್ಟು ಮನವಿಗಳು ಬಂದಿದ್ದವು. ಸ್ವಲ್ಪ ವಿಳಂಬವಾದರೂ ದೊಡ್ಡ ಮೊತ್ತದ ಅನುದಾನ ತಂದು ರಸ್ತೆ ಅಭಿವೃದ್ಧಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ವಿಶೇಷ ಮಾಹಿತಿ – ನಿಚ್ಚಣಕಿ ಗ್ರಾಮದ ಆರೋಗ್ಯ ಕೇಂದ್ರದ ಕಾಮಗಾರಿ ಕುರಿತು ಶಾಸಕರ ಸ್ಪಷ್ಟನೆ
ಇತ್ತೀಚೆಗೆ ನಮ್ಮ ವಾಹಿನಿಯಲ್ಲಿ ಕಿತ್ತೂರು ಕ್ಷೇತ್ರದ ನಿಚ್ಚಣಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿರುವ ಕುರಿತು ಸುದ್ದಿ ಪ್ರಸಾರ ಮಾಡಲಾಗಿತ್ತು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಬಾಬಾಸಾಹೇಬ್ ಪಾಟೀಲ ಅವರು, ಈ ವಿಷಯ ತಮ್ಮ ಗಮನಕ್ಕೂ ಬಂದಿದ್ದು, ಎರಡು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಬಂಧಪಟ್ಟ ಅನುದಾನವನ್ನು ತಡೆಹಿಡಿಯಲಾಗುವುದು ಎಂದು ಸ್ಪಷ್ಟಪಡಿಸಿದರು.
ರೈತರ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ
ಮುಂಬರುವ ಅಧಿವೇಶನದಲ್ಲಿ ರೈತರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಕೃಷಿ ಕ್ಷೇತ್ರದ ವಿವಿಧ ವಿಚಾರಗಳ ಕುರಿತು ಸಾಕಷ್ಟು ಚರ್ಚೆ ನಡೆಸಲಾಗುವುದು ಎಂದು ಶಾಸಕ ಬಾಬಾಸಾಹೇಬ್ ಪಾಟೀಲ ತಿಳಿಸಿದರು.
ವರದಿಗಾರರು:
ಶಾನೂಲ ಮತ್ತೆಖಾನ
ಕಿತ್ತೂರು
