Belagavi

ಬೆಳಗಾವಿ ಚಳಿಗಾಲದ ಅಧಿವೇಶನಕ್ಕಾಗಿ ಸುವರ್ಣಸೌಧಕ್ಕೆ 4,000ಕ್ಕೂ ಹೆಚ್ಚು ಪೊಲೀಸರ ಭದ್ರತಾ ಕೋಟೆ!

Share

ಕುಂದಾನಗರಿ ಬೆಳಗಾವಿಯಲ್ಲಿ ಡಿಸೆಂಬರ್ 2 ರಿಂದ ಆರಂಭವಾಗಲಿರುವ ರಾಜ್ಯ ಶಾಸಕಾಂಗದ ಚಳಿಗಾಲದ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸಂಪೂರ್ಣವಾಗಿ ಸಜ್ಜಾಗುತ್ತಿದೆ. ನಗರ ಪೊಲೀಸ್ ಕಮಿಷನರ್ ಪ್ರಕಾಶ್ ನಿಕಮ್ ಅವರು ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಿದ್ದು, 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯೊಂದಿಗೆ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಡಿಸೆಂಬರ್ 2 ರಿಂದ 11 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪೂರ್ವಸಿದ್ಧತೆಗಳು ಗರಿಗೆದರಿದ್ದು, ಸೌಧದ ಸ್ವಚ್ಛತೆ ಮತ್ತು ನವೀಕರಣ ಕಾರ್ಯಗಳು ವೇಗವಾಗಿ ಸಾಗಿವೆ. ಅಧಿವೇಶನದ ಭದ್ರತೆಗಾಗಿ ಹೊರಜಿಲ್ಲೆಗಳಿಂದ ಆಗಮಿಸಲಿರುವ ಸುಮಾರು 4,000 ಎಸ್.ಸಿ.ಪಿ.ಸಿ. ಸಿಬ್ಬಂದಿ, 500ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್ ಹಾಗೂ ಪಿ.ಎಸ್.ಐ.ಗಳು ಮತ್ತು ಹಿರಿಯ ಐ.ಪಿ.ಎಸ್. ಅಧಿಕಾರಿಗಳನ್ನು ಎರಡು ವಾರಗಳ ಕಾಲ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಸಿಬ್ಬಂದಿಯ ವಸತಿಗಾಗಿ ತಾತ್ಕಾಲಿಕ ಟೌನ್‌ಶಿಪ್ ನಿರ್ಮಿಸಲಾಗುತ್ತಿದ್ದು, ನಗರದ ವಿವಿಧ ಕಲ್ಯಾಣ ಮಂಟಪಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ನವೆಂಬರ್ 20 ರಿಂದ ಡಿಸೆಂಬರ್ 20 ರವರೆಗೆ ಸುವರ್ಣಸೌಧದ ಸುತ್ತಮುತ್ತಲಿನ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS_S) ಸೆಕ್ಷನ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ.

ಸುರಕ್ಷತೆಯ ದೃಷ್ಟಿಯಿಂದ ಸುವರ್ಣಸೌಧ ಹಾಗೂ ನಗರದಾದ್ಯಂತ 600 ಸಿಸಿಟಿವಿ ಕ್ಯಾಮೆರಾಗಳು, ಬ್ಯಾರಿಕೇಡಿಂಗ್ ಮತ್ತು ಸಂಚಾರಿ ಕಮಾಂಡ್ ಸೆಂಟರ್‌ಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನು ಪ್ರತಿಭಟನೆಗಳ ನಿರ್ವಹಣೆಗೆ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದ್ದು, 500 ಜನರ ವರೆಗಿನ ಸಣ್ಣ ಪ್ರಮಾಣದ ಧರಣಿಗಳಿಗೆ ಮಚ್ಚೆ ಬೈಪಾಸ್‌ನಲ್ಲಿ ಹಾಗೂ 3,000ಕ್ಕೂ ಹೆಚ್ಚು ಜನರು ಸೇರುವ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಧಾರವಾಡ ನಾಕಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರತಿಭಟನಾ ನಿರತರಿಗೆ ಕಲ್ಪಿಸಲಾಗಿರುವ ಅರ್ಜಿ ಸಲ್ಲಿಕೆ ಹಾಗೂ ಸಮಸ್ಯೆಗಳ ಶಮನಕ್ಕಾಗಿ ಎಸಿಪಿ, ಡಿಸಿಪಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳ ವಿಶೇಷ ಸಮಿತಿ ರಚಿಸಲಾಗಿದ್ದು, ಸ್ಥಳೀಯ ಮಟ್ಟದಲ್ಲೇ ತೊಡಕುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೈಟ್
ಪರಿಶೀಲನಾ ಸಭೆಯಲ್ಲಿ ಡಿಸಿಪಿಗಳಾದ ನಾರಾಯಣ್ ಬರಮನಿ ಹಾಗೂ ನಿರಂಜನ್ ರಾಜೇ ಅರಸ್ ಉಪಸ್ಥಿತರಿದ್ದರು.

Tags:

error: Content is protected !!