ಒಂದು ದೇಶದ ಸಂಸ್ಕೃತಿ, ಆಚಾರ, ವಿಚಾರ ಹಾಗೂ ಧರ್ಮ ಇವು ಕೇವಲ ಭಾಷಣದಿಂದಾಗಲಿ ಪ್ರವಚನಗಳಿಂದಾಗಲಿ ಉಳಿಯುವುದಿಲ್ಲ. ಬದಲಿಗೆ ಆಚರಣೆಯಿಂದ ಮಾತ್ರ ಉಳಿಯಲು ಸಾಧ್ಯ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಅವರು ಶನಿವಾರ ಇಲ್ಲಿನ ಶಿವಬಸವ ನಗರದ ಕಾರಂಜಿ ಮಠದ 27ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಶ್ರೀಗಳು ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಾಗ ಭಾರತ ಸುರಕ್ಷಿತವಾಗಿ ಗೋಚರಿಸುವುದು ಇಲ್ಲಿನ ಸಂಸ್ಕೃತಿ ಹಾಗೂ ಸಂಸ್ಕಾರಗಳಿಂದಾಗಿ. ಇದರ ಅಳಿವು ಮತ್ತು ಉಳಿವು ನಮ್ಮೆಲ್ಲರ ಮೇಲಿದೆ ಎಂದರು.
ಸಮಾರಂಭದ ಸಮ್ಮುಖವಹಿಸಿದ್ದ ನಂದಗಡ ವಿರಕ್ತ ಮಠದ ಚೆನ್ನವೀರ ದೇವರು ಮಾತನಾಡಿ ಸದಾಚಾರವೇ ಸಂತೋಷದ ಮೂಲವಾಗಿದ್ದು, ಸ್ವಾರ್ಥವನ್ನು ಬದಿಗಿಟ್ಟು ಸದಾಚಾರ ಸಂಪನ್ನರಾಗಿ ಎಲ್ಲರೂ ತಮ್ಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಮಾಜ ಸೇವೆಯೇ ಶಿವಪೂಜೆಯೆಂದರಿತು ಪ್ರತಿಯೊಬ್ಬರು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಸವ ಶ್ರೀ ಪುರಸ್ಕಾರಕ್ಕೆ ಭಾಜನರಾದ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಅಶೋಕ ಐರನ್ ಗ್ರೂಪ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ್ ಅಶೋಕ ಹುಂಬರವಾಡಿ ಅವರನ್ನು ಕಾರಂಜಿ ಮಠದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರಂಜಿ ಮಠದ ಉತ್ತರಾಧಿಕಾರಿ ಡಾ. ಶಿವಯೋಗಿ ದೇವರು, ಜಾನಪದ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಾಧ್ಯಾಪಕ ಏ.ಕೆ. ಪಾಟೀಲ ಸ್ವಾಗತಿಸಿದರು. ಕಾರಂಜಿ ಮಠದ ಕುಮಾರೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ಕೇಂದ್ರದ ರಾಜಶೇಖರ ಪಾಟೀಲ ನಿರೂಪಿಸಿದರು. ಕೊನೆಗೆ ನ್ಯಾಯವಾಗಿ ವಿ.ಕೆ ಪಾಟೀಲ ವಂದಿಸಿದರು.
