ದೀಪಾವಳಿ ಹಬ್ಬದ ಸಡಗರದ ನಡುವೆ ನಿರಾಶ್ರಿತ ಹಾಗೂ ನಿರ್ಗತಿಕ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ‘ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್’ ಹಾಗೂ ‘ಸಿಂಧೂರ್ ಸಿಲ್ಕ್ಸ್’ ಜಂಟಿಯಾಗಿ ‘ಸ್ಪ್ರೆಡಿಂಗ್ ಸ್ಮೈಲ್ಸ್ 2026’ ಎಂಬ ವಿಶೇಷ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಿವೆ. ಖಾನಾಪುರ ಹಾಗೂ ಕಾಕತಿವೇಸ್ ಪ್ರದೇಶಗಳಲ್ಲಿ ಹೂ-ತರಕಾರಿ ಮಾರಾಟಗಾರರು ಮತ್ತು ದೈನಂದಿನ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹೊಸ ಸೀರೆಗಳನ್ನು ವಿತರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಾಗಿದೆ.


ಕಳೆದ 2020 ರಿಂದ ಸತತವಾಗಿ ನಡೆದುಕೊಂಡು ಬಂದಿರುವ ಈ ಉದಾತ್ತ ಸೇವೆಯು ಪ್ರಸಕ್ತ 7ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಸಕ್ತ ವರ್ಷದ ಪ್ರಥಮ ಹಂತದಲ್ಲಿ 50 ಸೀರೆಗಳನ್ನು ಬಡ ಮತ್ತು ನಿರ್ಗತಿಕ ಮಹಿಳೆಯರಿಗೆ ಉಡುಗೊರೆಯಾಗಿ ನೀಡಲಾಗಿದೆ. ಬೆಳಗಾವಿ ನಗರದ ಕಾಕತಿವೇಸ್ ಹಾಗೂ ಖಾನಾಪುರ ಭಾಗದ ರಸ್ತೆ ಬದಿ ತರಕಾರಿ-ಹೂವು ಮಾರುವ ಮಹಿಳೆಯರು, ದೈನಂದಿನ ಕೂಲಿ ಕಾರ್ಮಿಕರು, ನಿರಾಶ್ರಿತರು ಹಾಗೂ ತೃತೀಯಲಿಂಗಿ ಸಮುದಾಯದವರಿಗೆ ಈ ನೂತನ ಸೀರೆಗಳನ್ನು ವಿತರಿಸಲಾಯಿತು. ದೀಪಾವಳಿಯಂತಹ ಶುಭ ಸಂದರ್ಭದಲ್ಲಿ ಬಡ ಮಹಿಳೆಯರಲ್ಲಿ ಗೌರವ ಹಾಗೂ ಸಂಭ್ರಮದ ವಾತಾವರಣ ಮೂಡಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಸಂಸ್ಥಾಪಕರಾದ ಸಂತೋಷ್ ದಾರೇಕರ್, ‘ಪ್ಯಾಸ್’ ಫೌಂಡೇಶನ್ ಸಂಸ್ಥಾಪಕ ಡಾ. ಮಾಧವ ಪ್ರಭು, ಸಿಂಧೂರ್ ಸಿಲ್ಕ್ಸ್ ಮಾಲೀಕರಾದ ಸುನಿಲ್ ಧೋಂಗಡಿ, ನ್ಯಾಯವಾದಿ ಸಚಿನ್ ಬಿಚ್ಚು, ಡಾ. ಶ್ರೀಕಾಂತ್ ವೇರ್ಗೆ, ನಿವೃತ್ತ ಸುಬೇದಾರ್ ಸುಧಾಕರ್ ಚಾಳಕೆ, ಜೈಂಟ್ಸ್ ಸಖಿ ಮತ್ತು ಬೆಳಗಾವಿ ಹಾಕಿ ಅಕಾಡೆಮಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾಜದ ಕಷ್ಟದಲ್ಲಿರುವ ಜನರ ಜೀವನದಲ್ಲಿ ಬೆಳಕು ಚೆಲ್ಲುವುದೇ ನೈಜ ದೀಪಾವಳಿ ಆಚರಣೆಯಾಗಿದ್ದು, ಮುಂಬರುವ ದಿನಗಳಲ್ಲೂ ಈ ಸೇವಾ ಅಭಿಯಾನ ಮುಂದುವರಿಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಂತೋಷ್ ದಾರೇಕರ್ ತಿಳಿಸಿದ್ದಾರೆ.

