ಸಾಲು ಸಾಲು ಬೆಲೆ ಏರಿಕೆಯೇ ರಾಜ್ಯದ ಕಾಂಗ್ರೆಸ್ ದಿವಾಳಿ ಸರ್ಕಾರದ ದೊಡ್ಡ ಉಡುಗೊರೆಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವ ಕೊಡುಗೆಯನ್ನು ನೀಡಿಲ್ಲ, ಆದರೆ ಈಗ ಬೆಲೆ ಏರಿಕೆಯಲ್ಲಿ ದಾಖಲೆ ಮಾತ್ರ ಮಾಡಲು ಹೊರಟಿದೆ, ಹಾಲು, ಬಸ್ ಹೀಗೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ದೊಡ್ಡ ಹೊಡೆತ ನೀಡಿದೆ. ಸರ್ಕಾರಿ ಖಜಾನೆಯ ದುಡ್ಡನ್ನು ಬೇಕಾಬಿಟ್ಟಿಯಾಗಿ ಬಳಸಿ ಖಾಲಿಯಾಗಿರುವ ಸರ್ಕಾರ ಈಗ ಜನಸಾಮಾನ್ಯನ ಜೇಬಿನ ಮೇಲೆ ಕಣ್ಣು ಹಾಕಿದೆ.
ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದ ಈ ಸರ್ಕಾರ. ರೈತರ ಮೇಲಿನ ಬದ್ಧತೆ ಮೊನ್ನೆಯೂ ಸಹ ಗೊತ್ತಾಗಿದೆ, ತೀವ್ರ ಬರ ಪರಿಸ್ಥಿತಿಯಲ್ಲಿ ಕೇವಲ ೨,೫೦೦ ರೂ. ಪರಿಹಾರ ನೀಡಲು ಮುಂದಾಗಿರುವ ಈ ಸರ್ಕಾರ ರೈತಪರ ಕಾಳಜಿ ಗೊತ್ತಿದೆ, ಈಗ ಬೆಲೆ ಏರಿಕೆಯನ್ನು ರೈತರ ಹೆಸರು ಹೇಳಿ ಬಚಾವಾಗಲು ಮುಂದಾದರೆ ಜನ ಒಪ್ಪಲ್ಲ. ರೈತರ ಬಗ್ಗೆ ಎಲ್ಲರಿಗೂ ಕಾಳಜಿ ಇದೆ, ರೈತರಿಗೆ ಬಗ್ಗೆ ಎಲ್ಲರಿಗೂ ಗೌರವವಿದೆ, ಈ ಸರ್ಕಾರ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ.
ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ಅನ್ನದಾತನ ಹೆಸರು ಹೇಳುತ್ತಿರುವುದು ಸಹ ಅಕ್ಷಮ್ಯ ಅಪರಾಧವೇ ಸರಿ.
ಸರ್ಕಾರ ಕೂಡಲೇ ಖಜಾನೆಯಿಂದ ರೈತ ಬಾಂಧವರಿಗೆ ಪ್ರೋತ್ಸಾಹ ನೀಡಲು ನಿರ್ಧಾರ ಕೈಗೊಳ್ಳಬೇಕು, ಆದರೆ ಈ ಸರ್ಕಾರ ರೈತರಿಗೂ ಮೋಸ ಮಾಡುವುದು ಗ್ಯಾರಂಟಿ, ಗೃಹಲಕ್ಷ್ಮೀ ಹಣ ಯಾವ ರೀತಿ ಯಾಮಾರಿಸಿದೆ ಎಂಬುದು ಜನತೆಗೆ ಗೊತ್ತಿದೆ.
ಶಕ್ತಿ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂ. ಬಾಕಿ ಉಳಿಸಿಕೊಂಡು ಈಗ ಅದನ್ನು ಸರಿದೂಗಿಸಲು ಅದರ ಭಾರವನ್ನು ಜನಸಾಮಾನ್ಯರಿಗೆ ಹೊರೆಸುತ್ತಿದೆ, ಮೇಲ್ನೋಟಕ್ಕೆ ಉಚಿತ ಎಂದು ಹೇಳಿ ಹತ್ತಾರು ಪಟ್ಟು ಕಸಿದುಕೊಳ್ಳುತ್ತಿದೆ. ಶಕ್ತಿ ಯೋಜನೆಯಡಿಯಲ್ಲಿ ಕೆ.ಎಸ್.ಆರ್.ಟಿ.ಸಿ. ೨,೧೮೩.೨೪ ಕೋಟಿ ರೂ., ಬಿಎಂಟಿಸಿಗೆ ೧,೦೬೮.೮೯ ಕೋಟಿ ರೂ., ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ೧೩೫೨.೮೮ ಕೋಟಿ ರೂ. ಹಾಗೂ ಕೆ.ಕೆ.ಆರ್.ಟಿ.ಸಿ ೧,೦೪೫.೯೫ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ, ಇದರ ಹೊರೆ ಜನಸಾಮಾನ್ಯರಿಗೆ ಹೊರೆಸುವ ಕೆಲಸ ಮಾಡಿದೆ, ೨೦೨೫ ರಲ್ಲಿ ಶೇ.೧೫ ರಷ್ಟು ಹಾಗೂ ಪ್ರಸಕ್ತ ವರ್ಷ ಶೇ.೨೬ ರಷ್ಟು ಬೆಲೆ ಏರಿಕೆ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ, ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ತೆಗೆದುಕೊಳ್ಳುವುದು ಕೇಳಿದ್ದೆವು, ಈ ಸರ್ಕಾರ ಉಚಿತ ಪ್ರಯಾಣ ಎಂದು ಹೇಳಿ ಕೊಟ್ಟಿದ್ದು ಕಸಿದುಕೊಳ್ಳುವ ಜೊತೆಗೆ ಜೇಬಿನಲ್ಲಿರುವ ಹಣವನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.
ಅವೈಜ್ಞಾನಿಕ ಬಸ್ ಪ್ರಯಾಣ ದರ ಹೆಚ್ಚಳ ಹಾಗೂ ದೀಪಾವಳಿ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿರುವ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಯೋಗ್ಯತೆ ಇಲ್ಲದಿದ್ದರೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ನಿಮಗಿಲ್ಲ. ಕೂಡಲೇ ಏರಿಸಿರುವ ಬಸ್ ಪ್ರಯಾಣ ದರವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
