Vijaypura

ಯಾಸೀನ್ ಹತ್ಯೆ ಪ್ರಕರಣ – ಪೊಲೀಸರ ಗುಂಡಿಗೆ ಹಂತಕನಿಗೆ ಗಾಯ

Share

ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಂತಾದಾಗ ಖಾಕಿ ತನ್ನ ಖದರ್ ತೋರಿಸ ಲೇಬೇಕಾಗುತ್ತದೆ. ಹಾಡುಹಗಲೇ ಗುಂಡಿನ ದಾಳಿ ನಡೆಸಿ ವ್ಯಕ್ತಿ ಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳಿಗೆ ಇದೀಗ ಪೊಲೀಸರ ಬಂದೂಕಿನ ಬಿಸಿ ತಟ್ಟಿದೆ. ಅಪರಾಧಿಗಳನ್ನು ಮಟ್ಟ ಹಾಕಲು ಪೊಲೀಸರು ಆಗಾಗ ತಮ್ಮ ಪಿಸ್ತೂಲ್‌ನ ನಳಿಕೆ ಸಡಿಲಿಸಿ ಕಾನೂನಿನ ಪಾಠ ಕಲಿಸಲು ಮುಂದಾಗುತ್ತಾರೆ ಎಂಬಂತೆ ವಿಜಯಪುರದಲ್ಲಿ ಮತ್ತೊಮ್ಮೆ ಖಾಕಿ ಬಂದೂಕು ಸದ್ದು ಮಾಡಿದೆ. ಯಾಸೀನ್ ಜುಬೇರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕಂಟ್ರಿ ಪಿಸ್ತೂಲ್‌ನಿಂದ ಪೊಲೀಸರ ಮೇಲೆಯೇ ಗುಂಡು ಹಾರಿಸಲು ಮುಂದಾದಾಗ ಈ ಫೈರಿಂಗ್ ನಡೆದಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಈ ಸ್ಟೋರಿ ನೋಡಿ…

ಹೌದು… ವಿಜಯಪುರ ದಲ್ಲಿ ಹಾಡುಹಗಲೇ ನಡೆದಿದ್ದ ಭೀಕರ ಹತ್ಯೆ ಪ್ರಕರಣದ ಹಿನ್ನೆಲೆ ಇದು. ನವೆಂಬರ್ 5ರಂದು ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಅಲಿಯಾಸ್ ಯಾಸೀನ್ ಜುಬೇರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಯಾಸೀನ್ ಮೇಲೆ ಪತ್ನಿಯ ಕಣ್ಣೆದುರೇ ಗುಂಡು ಹಾರಿಸಲಾಗಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಇನ್ನು ಈ ಕೊಲೆಗೆ ಡಿಜೆ ಹಚ್ಚುವ ವಿಚಾರದಲ್ಲಿ ಆರಂಭವಾಗಿದ್ದ ಹಳೆಯ ವೈಷಮ್ಯವೇ ಪ್ರಮುಖ ಕಾರಣ ಎನ್ನಲಾಗಿತ್ತು. ಠಕ್ಕೆ ನಿವಾಸಿಗಳಾಗಿದ್ದ ಯಾಸೀನ್ ಹಾಗೂ ಸಮೀರ್ ಮುಲ್ಲಾ ಒಂದೇ ಊರಿನವರಾಗಿದ್ದು, ಊರಿನಲ್ಲಿ ತಮ್ಮದೇ ನಡೆಯಬೇಕು, ತಮ್ಮದೇ ಪ್ರತಿಷ್ಠೆ ಇರಬೇಕು ಎಂಬ ವಿಚಾರವಾಗಿ ಇಬ್ಬರ ನಡುವೆ ಜಗಳ ಉಂಟಾಗಿತ್ತು ಎನ್ನಲಾಗಿದೆ.
ಈ ಹಿಂದಿನ ಗಲಾಟೆಯಲ್ಲಿ ಸಮೀರ್ ಹಾಗೂ ಆತನ ಆಪ್ತರ ಮೇಲೆ ಯಾಸೀನ್ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಅಂದಿನಿಂದಲೇ ಸೇಡು ತೀರಿಸಿಕೊಳ್ಳಲು ಸಮೀರ್ ಕಾಯುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ನವೆಂಬರ್ 5ರಂದು ಯಾಸೀನ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಆರೋಪ ಸಮೀರ್ ಮೇಲಿದೆ.

ಇನ್ನು ಯಾಸೀನ್ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಪ್ರಮುಖ ಆರೋಪಿ ಸಮೀರ್ ಮುಲ್ಲಾ ಅತಾಲಟ್ಟಿ ಗ್ರಾಮದ ಬಳಿ ಇರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಸಮೀರ್ ಕಂಟ್ರಿ ಪಿಸ್ತೂಲ್ ಗುರಿ ಇರಿಸಿ ದಾಳಿ ನಡೆಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ವೇಳೆ ಪೊಲೀಸರೂ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಸಮೀರ್ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಗಾಯಾಳು ಪೊಲೀಸರಿಗೆ ಚಿಕಿತ್ಸೆ ಮುಂದುವರಿದಿದೆ. ಇನ್ನು ಸಮೀರ್ ಮುಲ್ಲಾ ಸೇರಿದಂತೆ ರಷೀದ, ಇರ್ಷಾದ್ ಹಾಗೂ ಖದೀರ್ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಂಟ್ರಿ ಪಿಸ್ತೂಲ್ ಅನ್ನು ಕೇವಲ ಮೂರು ದಿನಗಳ ಹಿಂದಷ್ಟೇ ತರಿಸಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಗುಂಡೇಟಿನಿಂದ ಗಾಯಗೊಂಡಿರುವ ಸಮೀರ್ ಮುಲ್ಲಾನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರಕರಣದ ಇತರ ಆರೋಪಿಗಳ ಪತ್ತೆಗೆ ಪೊಲೀಸ್ ತನಿಖೆ ಚುರುಕುಗೊಂಡಿದೆ.

ಒಟ್ಟಿನಲ್ಲಿ ಡಿಜೆ ವಿಚಾರದಲ್ಲಿ ಆರಂಭವಾದ ಜಗಳ, ಊರಿನ ಪ್ರತಿಷ್ಠೆಯ ಕಿತ್ತಾಟ ಕೊನೆಗೆ ಹಾಡುಹಗಲೇ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿದೆ. ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚಲು ಮುಂದಾದ ಪೊಲೀಸರ ಮೇಲೆಯೇ ಕಂಟ್ರಿ ಪಿಸ್ತೂಲ್ ಗುರಿ ಇಟ್ಟಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಲ್ವರು ಆರೋಪಿಗಳ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಪೊಲೀಸರ ಮೇಲೆಯೇ ದಾಳಿ ನಡೆಸಿದರೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಕಾರ್ಯಾಚರಣೆ ರವಾನಿಸಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!