ಅಂಗನವಾಡಿಯಲ್ಲಿ ಊಟದ ಬಳಿಕ ಮೊಟ್ಟೆ ಸೇವಿಸಿದ ಮಕ್ಕಳು ಏಕಾಏಕಿ ಅಸ್ವಸ್ಥರಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ವಿವೇಕಾನಂದ ನಗರದಲ್ಲಿರುವ ಅಂಗನವಾಡಿಯಲ್ಲಿ ಒಟ್ಟು 8 ಮಕ್ಕಳು ಇದ್ದು, ಎಲ್ಲಾ 8 ಮಕ್ಕಳಿಗೂ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಊಟದ ಬಳಿಕ ಮಕ್ಕಳಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅಂಗನವಾಡಿ ಎದುರೇ ಮಕ್ಕಳು ವಾಂತಿ ಮಾಡಿಕೊಂಡು ಒದ್ದಾಡಿದ್ದಾರೆ. ಇನ್ನು ಕೆಲ ಮಕ್ಕಳಿಗೆ ಮನೆಯಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಮಕ್ಕಳ ಆರೋಗ್ಯ ಸ್ಥಿತಿ ಕಂಡು ಆತಂಕಗೊಂಡ ಪೋಷಕರು ತಕ್ಷಣವೇ ಅವರನ್ನು ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ಪೈಕಿ ಕೆಲವರ ಆರೋಗ್ಯ ಸ್ಥಿತಿ ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೊಟ್ಟೆ ಸೇವನೆಯ ಬಳಿಕ ಮಕ್ಕಳು ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣವೇನು ಎಂಬುದು ವೈದ್ಯಕೀಯ ಪರಿಶೀಲನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ತನಿಖೆಯಿಂದ ತಿಳಿದುಬರಬೇಕಿದೆ.


