Belagavi

ಅಧಿಕಾರ ಶಾಶ್ವತವಲ್ಲ, ಜನಪರ ಕೆಲಸಗಳೇ ಶಾಶ್ವತ – ಮಾಜಿ ಸಂಸದ ಈರಣ್ಣ ಕಡಾಡಿ

Share

ರಾಜಕಾರಣದಲ್ಲಿ ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಅಧಿಕಾರ ಎಂದಿಗೂ ಶಾಶ್ವತವಲ್ಲ, ಅಧಿಕಾರ ಸಿಕ್ಕಾಗ ಸಾರ್ವಜನಿಕ ಕ್ಷೇತ್ರದಲ್ಲಿ ಅಭಿವೃದ್ದಿ ಮತ್ತು ಜನಪರವಾದ ಕಾರ್ಯಗಳನ್ನು ಹೇಗೆ ಮಾಡಿದ್ದೇವೆ ಎಂಬುವುದು ಶಾಶ್ವತವಾಗುತ್ತದೆ ಎಂದು ರಾಜ್ಯಸಭಾ ಮಾಜಿ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ನ-06 ರಂದು ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಪ್ರೌಢ ಶಾಲೆಯ ಆವರಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿ ಹಾಗೂ ಗ್ರಾಮದ ಶ್ರೀ ಮಹಾಲಕ್ಷ್ಮೀ (ಗದ್ದುಗೆ) ದೇವಸ್ಥಾನದ ಹತ್ತಿರ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಶೈಕ್ಷಣಿಕ ವಿಕಾಸವೇ ದೇಶದ ಪ್ರಗತಿಗೆ ಮುಖ್ಯ ಅಡಿಪಾಯ. ಗ್ರಾಮದ ಮಕ್ಕಳಿಗೆ ಉತ್ತಮ ಸೌಲಭ್ಯ ಹಾಗೂ ಸುಸಜ್ಜಿತ ವಾತಾವರಣ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಸಂಸದರ ನಿಧಿ ಹಾಗೂ ಕಂಪನಿಗಳ ಸಿ.ಎಸ್.ಆರ್ ಫಂಡ್ ಸೂಕ್ತ ಬಳಕೆಯ ಮೂಲಕ ತಾಲೂಕಿನ ಶಾಲೆಗಳ ಮೂಲಸೌಕರ್ಯ ಬಲಪಡಿಸಲಾಗಿದೆ. ವಿದ್ಯಾರ್ಥಿಗಳು ಈ ಮೂಲಸೌಕರ್ಯದ ಸಂಪೂರ್ಣ ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಮಸಗುಪ್ಪಿ ಗ್ರಾಮದ ಅಭಿವೃದ್ದಿಗಾಗಿ ನನ್ನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಶ್ರೀ ಮಹಾಲಕ್ಷ್ಮೀ ಪ್ರೌಢ ಶಾಲೆ ಕೊಠಡಿ ನಿರ್ಮಾಣಕ್ಕೆ 12.5. ಲಕ್ಷ ರೂ, ಶ್ರೀ ಮಹಾಲಕ್ಷ್ಮೀ (ಗದ್ದುಗೆ) ದೇವಸ್ಥಾನಕ್ಕೆ 5 ಲಕ್ಷ ರೂ. ಬಡಲಕ್ಕನ್ನವರ ತೋಟದ ಶ್ರೀ ವಿಠ್ಠಲ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ, ಶ್ರೀ ಮಹರ್ಷಿ ಭಗೀರಥ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ 2.5 ಲಕ್ಷ ರೂ. ಹಾಗೂ ಮಸಗುಪ್ಪಿ ಗ್ರಾಮದ ಸಂಕೇಶ್ವರ-ಸಂಗಮ (ರಾ.ಹೆ 51) ರಸ್ತೆಯಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಸಿ.ಸಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ಮುಂದೆಯು ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಶೆಪ್ಪ ದೇವರಮನಿ, ಉಪಾಧ್ಯಕ್ಷ ಬಂದುಸಾಬ ನದಾಫ್, ಕಾರ್ಯದರ್ಶಿ ರೇವನಪ್ಪ ತೋಡಕಾರ, ರಾಮಣ್ಣ ಗಂಗಣ್ಣವರ, ಲಕ್ಷ್ಮಣ ನರಗುಂದ, ಸಾತಪ್ಪ ಕೋಳದುರ್ಗಿ, ಬಸವರಾಜ ಗಾಡವಿ, ವಿರುಪಾಕ್ಷ ಕೊಳವಿ, ಅಶೋಕ ಮಳಲಿ, ಈಶ್ವರ ಗಾಡವಿ, ಭೀಮಪ್ಪ ಆಶಿರೊಟ್ಟಿ, ಬಾಲಚಂದ್ರ ಹೊಸಕೊಟೆ, ಬಸಯ್ಯ ಹಿರೇಮಠ, ನಿಂಗರಾಜ ಗೊಂದಿ, ಭರಮಪ್ಪ ಗಂಗಣ್ಣವರ, ಲಿಂಗರಾಜ ಅಂಗಡಿ ಸೇರಿದಂತೆ ಸ್ಥಳೀಯ ಮುಖಂಡರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!