ನೆರೆಯ ಮಹಾರಾಷ್ಟ್ರ ಸರ್ಕಾರದ ಕೃಷ್ಣಾ ನದಿ ತಿರುವ ಯೋಜನೆಗೆ ಇದೀಗ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಮಹಾಬಲೇಶ್ವರ ಬಳಿ ಕೃಷ್ಣಾ ನದಿಯಿಂದ ಭೀಮಾ ನದಿಯ ಉಜನಿ ಜಲಾಶಯಕ್ಕೆ 40 ಟಿಎಂಸಿ ಅಡಿ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಸುಮಾರು 19 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ವಿಶ್ವಬ್ಯಾಂಕ್ ನೆರವು ಪಡೆಯಲು ಚಿಂತನೆ ನಡೆಸಲಾಗಿದೆ. ಇತ್ತ ಸಚಿವ ಎಂ.ಬಿ. ಪಾಟೀಲ ಅವರು ಯೋಜನೆ ಕಾನೂನುಬಾಹಿರ ಎಂದು ಆರೋಪಿಸಿದ್ದು, ಇದೀಗ ರೈತರು ಹಾಗೂ ಸಾರ್ವಜನಿಕರು ಕೂಡ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ನೆರೆಯ ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಮಹಾಬಲೇಶ್ವರ ಬಳಿ ಕೃಷ್ಣಾ ನದಿಯಿಂದ ಭೀಮಾ ನದಿಯ ಉಜನಿ ಜಲಾಶಯಕ್ಕೆ 40 ಟಿಎಂಸಿ ಅಡಿ ನೀರು ಹರಿಸುವ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ರೂಪಿಸಿದೆ. ಸುಮಾರು 19 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನ ಗೊಳಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಈ ಯೋಜನೆಯಿಂದ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿರುವ ಸಚಿವರು, ಯೋಜನೆ ಕಾನೂನು ಬಾಹಿರವಾಗಿದ್ದು, ಇದನ್ನು ತಡೆಯಲು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ಕೃಷ್ಣಾ ನದಿ ನೀರನ್ನು ಬೇರೆಡೆಗೆ ತಿರುಗಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ರೈತರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಉತ್ತರ ಕರ್ನಾಟಕ ಭಾಗಕ್ಕೆ ಈ ಯೋಜನೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ನೀರಿನ ಮೇಲೆ ಕರ್ನಾಟಕದ ರೈತರಿಗೂ ಹಕ್ಕಿದೆ. ಯಾವುದೇ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ರೀತಿಯಲ್ಲಿ ಏಕಪಕ್ಷೀಯವಾಗಿ ಯೋಜನೆ ರೂಪಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಯೋಜನೆಗೆ ತಡೆ ನೀಡಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಮಹಾರಾಷ್ಟ್ರದ ಕೃಷ್ಣಾ ನದಿ ತಿರುವ ಯೋಜನೆ ಇದೀಗ ಕರ್ನಾಟಕದಲ್ಲಿ ರಾಜಕೀಯ ಹಾಗೂ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕಡೆ ಸಚಿವ ಎಂ.ಬಿ. ಪಾಟೀಲ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರೆ, ಮತ್ತೊಂದೆಡೆ ರೈತರು ಹಾಗೂ ಸಾರ್ವಜನಿಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಜಲವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
