ಖಾನಾಪೂರ ತಾಲೂಕಿನ ವಲಮಣಿ ಗ್ರಾಮದಲ್ಲಿ ಕಳುವಾಗಿದ್ದ ₹1.40 ಲಕ್ಷ ಮೌಲ್ಯದ ಎರಡು ಎಮ್ಮೆಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಎಮ್ಮೆಗಳನ್ನು ಮೂಲ ರೈತನಿಗೆ ಹಸ್ತಾಂತರಿಸಲಾಗಿದೆ.
ವಲಮಣಿ ಗ್ರಾಮದ ರೈತ ಪರಶರಾಮ ಪವಾರ ಎಂಬುವವರು ತಮ್ಮ ಜಮೀನಿನಲ್ಲಿ ಸಾಕಿದ್ದ ₹1.40 ಲಕ್ಷ ಮೌಲ್ಯದ ಎರಡು ಎಮ್ಮೆಗಳನ್ನು ಕಳೆದ ಅಕ್ಟೋಬರ್ 23ರ ರಾತ್ರಿ ಅಪರಿಚಿತ ಕಳ್ಳರು ಕದ್ದು ಪರಾರಿಯಾಗಿದ್ದರು. ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ, ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ಎಲ್. ಎಚ್. ಗೌಂಡಿ ಹಾಗೂ ಪಿಎಸ್‌ಐ ಸಿದ್ರಾಮಪ್ಪ ಉನ್ನದ ನೇತೃತ್ವದ ಪೊಲೀಸ್ ತಂಡವು ಬೆಳಗಾವಿ ತಾಲೂಕಿನ ಭೀಮಪ್ಪ ಪೂಜೇರಿ (34), ಭರಮಪ್ಪ ಪೂಜೇರಿ (22) ಮತ್ತು ಯಲ್ಲಪ್ಪ ಗುಂಡಲಗುಪ್ಪಿ (19) ಎಂಬ ಮೂವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಎರಡೂ ಎಮ್ಮೆಗಳನ್ನು ವಶಪಡಿಸಿಕೊಂಡು ರೈತನಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸರ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
