ಖಾನಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕರಿಯರ್ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲ ವಿಕಾಸ ಅಕಾಡೆಮಿಯ ಸಹ ನಿರ್ದೇಶಕ ವಿರೂಪಾಕ್ಷ ಪಾಟೀಲ ಅವರು, ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಭವಿಷ್ಯದ ಗುರಿಯತ್ತ ಕೇಂದ್ರೀಕರಿಸಬೇಕೆಂದು ಕಿವಿಮಾತು ಹೇಳಿದರು.

ಖಾನಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕರಿಯರ್ ಮಾರ್ಗದರ್ಶನ ಶಿಬಿರವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ವಿಕಾಸ ಅಕಾಡೆಮಿಯ ಸಹ ನಿರ್ದೇಶಕ ವಿರೂಪಾಕ್ಷ ಪಾಟೀಲ, “ವಿದ್ಯಾರ್ಥಿ ದೆಸೆಯಲ್ಲಿ ಪ್ರೇಮ, ಮೋಜು-ಮಸ್ತಿಯಿಂದ ಮನಸ್ಸನ್ನು ಅತ್ತಿತ್ತ ಹರಿಯಬಿಡದೆ, ಯಾವುದು ಒಳಿತು ಯಾವುದು ಕೆಡುಕು ಎಂಬ ಅರಿವನ್ನು ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಶ್ರಮಿಸಬೇಕು” ಎಂದು ಸಲಹೆ ನೀಡಿದರು. ಅಕಾಡೆಮಿ ಅಧ್ಯಕ್ಷ ಅಡವೇಶ ಇಟಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಇಟಗಿ, ಗ್ರಾಮೀಣ ಭಾಗದ ಪ್ರತಿಭೆಗಳು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಸಾಧನೆಯನ್ನು ಉದಾಹರಿಸಿ, ವಿದ್ಯಾರ್ಥಿಗಳು ಉನ್ನತ ಧೇಯದೊಂದಿಗೆ ಮುಂದೆ ಬರಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಬಿ. ತಾಬೋಜಿ, ಪ್ರಸನ್ನ ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
