ಖಾನಾಪುರ ನಗರದ ಹಳೆಯ ಬಸ್ ನಿಲ್ದಾಣಕ್ಕೆ ಕಳೆದ ಎರಡು ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಆಡಳಿತ ಮಂಡಳಿ ಸ್ಪಂದಿಸದ ಹಿನ್ನೆಲೆಯಲ್ಲಿ ಬರುವ ಶನಿವಾರ, ಅಕ್ಟೋಬರ್ 31 ರಂದು ಬಸ್ ಡಿಪೋ ಬಂದ್ಗೆ ಕರೆ ನೀಡಲಾಗಿದೆ.
ಖಾನಾಪುರ ನಗರದ ಜಾಂಬೋಟಿ ಕ್ರಾಸ್ನಿಂದ ಶಿವ ಸ್ಮಾರಕದ ಬಳಿಯಿರುವ ಹಳೆಯ ಬಸ್ ನಿಲ್ದಾಣದವರೆಗಿನ ಬಸ್ ಫೇರಿಗಳನ್ನು ಕಳೆದ ಎರಡು ವರ್ಷಗಳಿಂದ ಬಂದ್ ಮಾಡಲಾಗಿದ್ದು, ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಇದರಿಂದಾಗಿ ವಿಕಲಚೇತನರು, ಮಹಿಳೆಯರು, ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಪ್ರತಿದಿನ 1 ರಿಂದ 2 ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾದ ಪರಿಸ್ಠಿತಿ ನಿರ್ಮಾಣವಾಗಿದೆ. ಬಡ ಕುಟುಂಬಗಳಿಗೆ ಆಟೋ ಬಾಡಿಗೆ ಭರಿಸಲು ಸಾಧ್ಯವಾಗದೆ ಕಾಲ್ನಡಿಗೆಯೊಂದೇ ದಾರಿಯಾಗಿದೆ. ಈ ಸಮಸ್ಯೆ ಇತ್ಯರ್ಥಪಡಿಸುವಂತೆ ಸ್ಥಳೀಯ ಶಾಸಕರು ಸೂಚನೆ ನೀಡಿದ್ದರೂ ಹಾಗೂ ವಿವಿಧ ಸಂಘ-ಸಂಸ್ಥೆಗಳು, ವರ್ತಕರ ಸಂಘಟನೆಗಳು ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಖಾನಾಪುರ ಡಿಪೋ ಅಧಿಕಾರಿಗಳು ಕ್ಯಾರೇ ಎಂದಿಲ್ಲ. ಅಧಿಕಾರಿಗಳ ಈ ಉಡಾಫೆ ಧೋರಣೆಯನ್ನು ಖಂಡಿಸಿ ಬರುವ ಶನಿವಾರ, ಅಕ್ಟೋಬರ್ 31 ರಂದು ವರ್ತಕರ ಸಂಘಟನೆಯ ವತಿಯಿಂದ ಬಸ್ ಡಿಪೋ ಬಂದ್ ಮಾಡಲು ಕರೆ ನೀಡಲಾಗಿದೆ.
