Belagavi

ಕಬ್ಬಿಗೆ ಸೂಕ್ತ ಬೆಲೆ ಹಾಗೂ ಬಿಲ್ ಪಾವತಿಗೆ ಆಗ್ರಹಿಸಿ ಹಿಂಡಲಗಾ ಜೈಲ್ ಭರೋ ಚಳುವಳಿ

Share

ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ರೈತರು ಕೈಗೊಂಡ ‘ಜೈಲ್ ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಜೈಲು ಮುಂಭಾಗದಲ್ಲಿ ನೂರಾರು ರೈತರು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು. ಪೊಲೀಸರು ತಡೆದಾಗ ಬ್ಯಾರಿಕೇಡ್‌ಗಳನ್ನು ತಳ್ಳಾಡಿ ಆಕ್ರೋಶ ಹೊರಹಾಕಿದ ಘಟನೆ ನಡೆಯಿತು.

ಬೆಳಗಾವಿ ತಾಲೂಕಿನ ಹೊರವಲಯದಲ್ಲಿರುವ ಹಿಂಡಲಗಾ ಗ್ರಾಮದ ಕೇಂದ್ರ ಕಾರಾಗೃಹದ ಮುಂಭಾಗದಲ್ಲಿ ರೈತ ಮುಖಂಡ ಕಿಶನ್ ನಂದಿ ನೇತೃತ್ವದಲ್ಲಿ ನೂರಾರು ರೈತರು ಒಟ್ಟುಗೂಡಿ ಜೈಲಿಗೆ ಮುತ್ತಿಗೆ ಹಾಕಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಜೈಲ ಸುತ್ತಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರೂ, ಆಕ್ರೋಶಗೊಂಡ ರೈತರು ಜೈಲಿನ ಪ್ರವೇಶ ದ್ವಾರದ ಬಳಿ ರಸ್ತೆಯ ಮೇಲೆಯೇ ಕುಳಿತು ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹಿಂದಿನ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 48 ರೂ. ನಿಗದಿಯಾಗಿದ್ದು, ಪ್ರಸ್ತುತ 54 ರೂ.ಗಳಷ್ಟು ಸರ್ಕಾರದ ಟೆಂಡರ್ ಇದ್ದರೂ ಕೇವಲ 50 ರೂ. ನೀಡಲಾಗುತ್ತಿದೆ. ಇದರಿಂದ ಪ್ರತಿ ಟನ್ ಕಬ್ಬಿಗೆ 4,000 ರೂ. ಬಿಲ್ ನೀಡಿ ರೈತರಿಗೆ ವಂಚಿಸಲಾಗುತ್ತಿದ್ದು, ಕೂಡಲೇ ಕನಿಷ್ಠ 54 ರೂ. ನಂತೆ ಪೂರ್ಣ ಮೊತ್ತ ಪಾವತಿಸಬೇಕು ಎಂದು ರೈತರು ಆಗ್ರಹಿಸಿದರು.ಈ ವೇಳೆ ಪೊಲೀಸರು ರೈತರನ್ನು ತಡೆಯಲು ಯತ್ನಿಸಿದಾಗ ಬ್ಯಾರಿಕೇಡ್‌ಗಳನ್ನು ತಳ್ಳಾಡಿ, ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಧರಣಿ ಮುಂದುವರಿಸಿದರು.

ಇನ್ನೊಂದೆಡೆ ರೈತ ಹೋರಾಟದ ಪ್ರಮುಖ ರೂವಾರಿಗಳಾದ ಚೂನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಗುರ್ಲಾಪುರದಿಂದ ಸಹಸ್ರಾರು ಸಂಖ್ಯೆಯ ರೈತರು ಸಾಗರೋಪಾದಿಯಲ್ಲಿ ಬೆಳಗಾವಿಯತ್ತ ಪಾದಯಾತ್ರೆ ಬೆಳೆಸಿದ್ದಾರೆ. ಕಬ್ಬಿನ ಬಿಲ್ ಪಾವತಿ ಹಾಗೂ ನ್ಯಾಯಯುತ ದರ ನಿಗದಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದ ರೈತ ಮುಖಂಡ ಚೂನ್ನಪ್ಪ ಪೂಜೇರಿ, ಕಬ್ಬಿಗೆ ಎಸ್‌ಎಪಿ (State Advised Price) ದರ ನಿಗದಿಪಡಿಸುವ ಬಗ್ಗೆ ಮಾಧ್ಯಮಗಳು ಹಾಗೂ ಕೃಷಿಕರು ಎಷ್ಟೇ ಪ್ರಶ್ನಿಸಿದರೂ ರಾಜ್ಯ ಸರ್ಕಾರದ ಸಚಿವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾ ಜಾರಿಕೊಳ್ಳುತ್ತಿದ್ದಾರೆ ಎಂದು ತೀವ್ರವಾಗಿ ಆಕ್ಷೇಪಿಸಿದರು.

ರೈತರು ಪ್ರತಿವರ್ಷ ಬೆಳೆ ಬೆಳೆಯಬೇಕೇ ಹೊರತು ಎಂಟು ದಿನಕ್ಕೊಮ್ಮೆ ಸಂಕಷ್ಟಕ್ಕೆ ಸಿಲುಕಿ ಒಣಗಿ ಹೋಗಬಾರದು. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಬಾಗಿದ ತಲೆಯಿಂದ ಪ್ರಾಮಾಣಿಕ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬೆಳಗಾವಿ ಜಿಲ್ಲೆಯ 50 ಲಕ್ಷಕ್ಕೂ ಹೆಚ್ಚು ಜನರನ್ನು ಸಂಘಟಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Tags:

error: Content is protected !!