ಕಬ್ಬಿಗೆ ಪ್ರತಿ ಟನ್ಗೆ 5,500 ರೂಪಾಯಿ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ ರೈತರನ್ನು ಶಾಂತಗೊಳಿಸಿದ ಸಚಿವರು, ನಾಳೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಮಹತ್ವದ ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ. ಸಚಿವರ ಭರವಸೆಯ ಬೆನ್ನಲ್ಲೇ ರೈತರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

ಜಿಲ್ಲೆಯಲ್ಲಿ ಕಬ್ಬಿಗೆ ಪ್ರತಿ ಟನ್ಗೆ ₹5,500 ನಗದು ಬಿಲ್ ಹಾಗೂ ಎಸ್ಐಪಿ ಮೂಲಕ ಹೆಚ್ಚುವರಿ ₹1,000 ನೀಡಬೇಕು ಎಂದು ಆಗ್ರಹಿಸಿ ಮುಂಜಾನೆಯಿಂದಲೇ ಸಕ್ಕರೆ ಸಂಸ್ಥೆ ಕಚೇರಿ ಬಂದ್ ಮಾಡಿ ರೈತರು ಆಂದೋಲನ ಆರಂಭಿಸಿದ್ದರು. ರಸ್ತಾ ರೋಕೋ, ಜೈಲ್ ಬರೋ ಮತ್ತು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸದಿದ್ದಾಗ, ಆಕ್ರೋಶಗೊಂಡ ರೈತರು ಪಾದಯಾತ್ರೆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಕಳೆದ ಎರಡು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಬ್ಬಿನ ಬಾಕಿ ಬಿಲ್ ಘೋಷಿಸಿಲ್ಲ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸುವ ಜೊತೆಗೆ ರೈತರಿಗಾಗಿ “ಆರನೇ ಗ್ಯಾರಂಟಿ”ಯಾಗಿ ಕಬ್ಬಿನ ಸೂಕ್ತ ಬೆಲೆಯನ್ನು ಜಾರಿಗೊಳಿಸಬೇಕು ಎಂದು ರೈತರು ಒತ್ತಾಯಿಸಿದರು. ಕಬ್ಬಿನ ದರದ ವಿಚಾರವಾಗಿ ವಿವಿಧ ರೈತ ಸಂಘಟನೆಗಳು ಬೇರೆ ಬೇರೆ ಬೇಡಿಕೆಗಳನ್ನು ಇಡುತ್ತಿರುವುದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ಎಲ್ಲಾ ರೈತ ಸಂಘಟನೆಗಳು ಒಂದಾಗಬೇಕು. ನಾಳೆ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರ ಜಂಟಿ ಸಭೆ ಕರೆಯಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಸಚಿವರ ಮಧ್ಯಸ್ಥಿಕೆ ಹಾಗೂ ಭರವಸೆಯ ಹಿನ್ನೆಲೆಯಲ್ಲಿ ರೈತ ಮುಖಂಡ ಗಣೇಶ್ ಮತ್ತು ಇತರ ನಾಯಕರು ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ನಾಳೆ ನಡೆಯಲಿರುವ ಡಿಸಿ ನೇತೃತ್ವದ ಸಭೆಯಲ್ಲಿ ರೈತರ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಮಂತ್ರಿಗಳು ಹಾಗೂ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿ ಮತ್ತಷ್ಟು ಉಗ್ರ ಹೋರಾಟ ರೂಪಿಸುವುದಾಗಿ ಸರ್ಕಾರ ಮತ್ತು ಸಚಿವರಿಗೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
