ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಕರಾಟೆಯಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ದೈಹಿಕ ಬೆಳವಣಿಗೆ ಹಾಗೂ ರಕ್ಷಣೆಗೆ ಅತ್ಯಂತ ಅಗತ್ಯವಾಗಿದೆ ಎಂದು ಮೇಯರ್ ಪ್ರೀತಿ ಕಾಮಕರ್ ಹೇಳಿದರು.

ಕಂಪ್ಲೀಟ್ ಕರಾಟೆ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರಾಟೆ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾ ಚಟುವಟಿಕೆಗಳೂ ಅತ್ಯಂತ ಮುಖ್ಯ ಎಂದು ಅಭಿಪ್ರಾಯಪಟ್ಟ ಅವರು, ಸಾಧಕ ಕ್ರೀಡಾಪಟುಗಳಿಗೆ ಬ್ಲ್ಯಾಕ್ ಬೆಲ್ಟ್ ಪ್ರಧಾನ ಮಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಯರ್ ಪ್ರೀತಿ ಕಾಮಕರ್, ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಕರಾಟೆಯಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅವರ ದೈಹಿಕ ಬೆಳವಣಿಗೆ ಹಾಗೂ ರಕ್ಷಣೆಗೆ ಅತ್ಯಂತ ಅಗತ್ಯವಾಗಿದೆ ಎಂದರು. ಕರಾಟೆಯು ವಿಶೇಷವಾಗಿ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಬಲವನ್ನು ನೀಡುತ್ತದೆ. ಕ್ರೀಡಾಪಟುಗಳಿಗೆ ಮಹಾನಗರ ಪಾಲಿಕೆಯಿಂದ ಪೂರ್ಣ ಪ್ರೋತ್ಸಾಹ ಸಿಗಲಿದ್ದು, ಬಂಗಾರದ ಪದಕ (ಗೋಲ್ಡ್ ಮೆಡಲ್) ವಿಜೇತರಿಗೆ ಪಾಲಿಕೆಯಿಂದ 1.5 ಲಕ್ಷ ರೂಪಾಯಿ ಆರ್ಥಿಕ ಅನುದಾನ ನೀಡಲಾಗುವುದು. ಜೊತೆಗೆ ಕ್ರೀಡೆಗಾಗಿ ವಿಶೇಷ ಅನುದಾನ ಮೀಸಲಿಡುವ ಕುರಿತು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು ಹಾಗೂ ಅಧಿಕಾರಾವಧಿಯ ಕೊನೆಯಲ್ಲಿ ‘ಮೇಯರ್ ಟ್ರೋಫಿ’ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಕಾರ್ಯದರ್ಶಿ ಹಾಗೂ ಕರಾಟೆ ಮಾಸ್ಟರ್ ಜಿತೇಂದ್ರ ಕಾಕತೀಕರ್ ಮಾತನಾಡಿ, ಮಕ್ಕಳು ಕರಾಟೆಯಲ್ಲಿ ಬಿಳಿ (ವೈಟ್) ಬೆಲ್ಟ್‌ನಿಂದ ಆರಂಭಿಸಿ ಹಳದಿ, ಕಿತ್ತಳೆ, ಹಸಿರು, ನೀಲಿ, ನೇರಳೆ, ಕಂದು ಹಾಗೂ ಅಂತಿಮವಾಗಿ ‘ಬ್ಲ್ಯಾಕ್ ಬೆಲ್ಟ್’ ತಲುಪಲು ಸುಮಾರು 5 ವರ್ಷಗಳ ಸುದೀರ್ಘ ಕಠಿಣ ಪರಿಶ್ರಮ ಬೇಕಾಗುತ್ತದೆ. ತರಬೇತಿ ಶಿಬಿರಗಳು, ಕಟಾ, ಸ್ಪಾರಿಂಗ್, ಯೋಗಾಸನ ಮತ್ತು ವಿವಿಧ ಮಟ್ಟದ ಪಂದ್ಯಾವಳಿಗಳನ್ನು ದಾಟಿ ಬರುವ ಮಕ್ಕಳ ಈ ಯಶಸ್ಸಿಗೆ ಪೋಷಕರ ತ್ಯಾಗ, ಬೆಂಬಲ ಹಾಗೂ ಆರ್ಥಿಕ ನೆರವೇ ಅತಿ ದೊಡ್ಡ ಬೆನ್ನೆಲುಬಾಗಿದೆ. ಶಾಲೆಗೆ ಕಳುಹಿಸುವುದರ ಜೊತೆಗೆ 36ಕ್ಕೂ ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವ ಪೋಷಕರ ಶ್ರಮ ಅತ್ಯಂತ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವರ್ಣರಂಜಿತ ಬೆಲ್ಟ್ ಪರೀಕ್ಷೆ ಹಾಗೂ ಸಮಾರಂಭದಲ್ಲಿ, 5 ವರ್ಷಗಳ ಸತತ ಕಠಿಣ ಅಭ್ಯಾಸದ ನಂತರ 8 ವಿದ್ಯಾರ್ಥಿಗಳು ‘ಬ್ಲ್ಯಾಕ್ ಬೆಲ್ಟ್’ ಪದವಿ ಪಡೆದು ಸಾಧನೆ ಮಾಡಿದರು. ಬ್ಲ್ಯಾಕ್ ಬೆಲ್ಟ್ ಪಡೆದ ಕ್ರೀಡಾಪಟುಗಳಾದ ಗೌರವಿ ಮೇದಾರ, ಸೃಷ್ಟಿ ಪಾಟೀಲ, ಸಂದೀಪ್ ಅಂಗಡಿ, ಅಮರ್ ಶಾನಭಾಗ, ಶ್ರೀರಕ್ಷಾ ನಾಯಕ್, ವಿನಯ್ ಆರ್. ನಾಯಕ್ ಮತ್ತು ಪ್ರಣವ್ ಉಗಾರ ಸೇರಿದಂತೆ 8 ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳು ‘ಶೋಟೋಕಾನ್ ಇಂಡಿಯಾ’ ಸಂಘಟನೆಯ ಅಧ್ಯಕ್ಷ ಭಾರ್ಗವ್ ರೆಡ್ಡಿ, ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಕಾರ್ಯದರ್ಶಿ ಜಿತೇಂದ್ರ ಕಾಕತೀಕರ್, ಅಕ್ಷಯ್ ಪರಮೋಜಿ ಹಾಗೂ ಭೂಷಣ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಇಂಡಿಯನ್ ಬಾಡಿಬಿಲ್ಡಿಂಗ್ ಫೆಡರೇಶನ್ ಸಂಘಟನಾ ಕಾರ್ಯದರ್ಶಿ ಅನಿಲ್ ಆಂಬ್ರೋಲೆ ಮತ್ತು ವಿನಾಯಕ್ ಕಾಮಕರ್ ಉಪಸ್ಥಿತರಿದ್ದರು.
