Belagavi

ಕಬ್ಬಿನ ದರಕ್ಕೆ ಕೇಂದ್ರದ ಎಂಎಸ್‌ಪಿ ಹೆಚ್ಚಳವೇ ಶಾಶ್ವತ ಪರಿಹಾರ: ಸಚಿವ ಸತೀಶ್ ಜಾರಕಿಹೊಳಿ

Share

ಕಬ್ಬು ಬೆಳೆಗಾರರ ಬೆಲೆ ಸಮರ ಹಾಗೂ ಮುಂಬರುವ ಜಿಪಂ-ತಾಪಂ ಚುನಾವಣೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಕಬ್ಬಿನ ದರ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಎಂ.ಎಸ್.ಪಿ (MSP) ಹೆಚ್ಚಿಸುವುದೇ ಶಾಶ್ವತ ಪರಿಹಾರ ಎಂದಿರುವ ಅವರು, ರಾಜ್ಯ ಸರ್ಕಾರದ ಕಡೆ ಬೆರಳು ತೋರಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಕ್ಷಣವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಬ್ಬಿನ ದರಕ್ಕೆ ಸಂಬಂಧಿಸಿದಂತೆ ಸರ್ಕಾರದ ಬಳಿ ಯಾವುದೇ ಸಮಸ್ಯೆಯಿಲ್ಲ, ಮುಖ್ಯಮಂತ್ರಿಗಳು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ಸರ್ಕಾರ ನಿಗದಿಪಡಿಸಿದ ದರವನ್ನು ರೈತರು ಒಪ್ಪದ ಕಾರಣ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಎಂ.ಎಸ್.ಪಿ (MSP) ಹೆಚ್ಚಾದರೆ ಮಾತ್ರ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯ. ಮಾರುಕಟ್ಟೆಯಲ್ಲಿನ ಸಕ್ಕರೆ ಮಾರಾಟ ದರವನ್ನು ಅಧಿಕೃತಗೊಳಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಎಂ.ಎಸ್.ಪಿ ಹೆಚ್ಚಳವೇ ಇದಕ್ಕೆ ಶಾಶ್ವತ ಪರಿಹಾರವೆಂದು ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ತಕ್ಷಣವೇ ಇದಕ್ಕೆ ಪರಿಹಾರ ಘೋಷಣೆ ಮಾಡಬೇಕು. ಎಂಎಸ್ಪಿ ಹೆಚ್ಚಳವಾದರೆ ಹೆಚ್ಚುವರಿ ಹಣವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

ದಶಕಗಳ ಹಳೆಯ ಬಳ್ಳಾರಿ ನಾಲಾ ಸಮಸ್ಯೆಯ ಇತ್ಯರ್ಥಕ್ಕೆ ರಾಜ್ಯ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ತಿಳಿಸಿದ ಸಚಿವರು, 25 ಎಕರೆ ಜಮೀನಿಗೆ ಆಲಮಟ್ಟಿಗಿಂತಲೂ ಹೆಚ್ಚಿನ ಪರಿಹಾರವನ್ನು ನೀಡಲಾಗುತ್ತಿದೆ ಎಂದರು. ಹಿಂದೆ ಕೇವಲ 5 ರಿಂದ 10 ಲಕ್ಷ ರೂ. ಪರಿಹಾರ ಸಿಗುತ್ತಿತ್ತು, ಆದರೆ ಈಗ ಹೆಚ್ಚಿನ ಮೊತ್ತ ನಿಗದಿಯಾಗಿದೆ. ಇನ್ನು ಬುಡಾ (BUDA) ಯೋಜನೆಯಡಿ ಭೂಮಿ ನೀಡಿದವರಿಗೂ ನಿಯಮಾನುಸಾರ ಪರಿಹಾರ ನೀಡಲಾಗುವುದು. ರೈತರ ಜೈಲ್ ಭರೋ ಮತ್ತು ಗುರ್ಲಾಪುರ ಚಳುವಳಿ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿದೆ. ಅತಿಯಾದ ಮಳೆಯಿಂದಾಗುವ ಅನಾಹುತಗಳನ್ನು ತಡೆಯುವುದು ಕಷ್ಟವಾದರೂ, ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಅಭಯ ನೀಡಿದರು.

ಡಿಸೆಂಬರ್ 15 ರೊಳಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ನೋಟಿಫಿಕೇಷನ್ ಹೊರಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30 ರಿಂದಲೇ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಚುನಾವಣಾ ಅಧಿಸೂಚನೆಗೂ ಮುನ್ನವೇ ಅಧಿವೇಶನವನ್ನು ಪೂರ್ಣಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಜಿಪಂ ಮತ್ತು ತಾಪಂ ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಮೈಸೂರು ರಾಜಕಾರಣದ ಬಗ್ಗೆ ತಮಗೆ ಹೆಚ್ಚಿನ ಕಲ್ಪನೆಯಿಲ್ಲ ಎಂದ ಸಚಿವರು, ಕೇಂದ್ರ ಸರ್ಕಾರದ ಮಾನದಂಡಗಳಂತೆಯೇ ನಿರಾಶ್ರಿತರಿಗೆ ಹಾಗೂ ರೈತರಿಗೆ ಸೂಕ್ತ ಪರಿಹಾರ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ ಎಂದರು.

Tags:

error: Content is protected !!