Chikkodi

ಚಿಕ್ಕೋಡಿಯಲ್ಲಿ ವೈಭವದ ಕನ್ನಡ ರಾಜ್ಯೋತ್ಸವ ಮೆರವಣಿಗೆ: ಜಾನಪದ ಕಲಾತಂಡಗಳ ರಂಗು, ಕಂಗೊಳಿಸಿದ ಕನ್ನಡ ಡಿಂಡಿಮ

Share

ತಾಲೂಕಾಡಳಿತ, ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಭಾನುವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಅದ್ಧೂರಿ ಹಾಗೂ ವೈಭವೋಪೇತ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಾನಪದ ಕಲಾತಂಡಗಳ ಮೆರುಗು, ನಾದಸ್ವರ ಹಾಗೂ ವಾದ್ಯಮೇಳಗಳ ಮೆರವಣಿಗೆಯ ಆಕರ್ಷಣೆಯನ್ನು ಇಮ್ಮಡಿಗೊಳಿಸಿದವು.

ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದು, ಇಡೀ ಚಿಕ್ಕೋಡಿ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಕನ್ನಡಿಗರ ಆರಾಧ್ಯ ದೈವ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಎಸಿ ಸುಭಾಷ್ ಸಂಪಗಾವಿ ಸೇರಿದಂತೆ ‌ವಿವಿಧ ಗಣ್ಯರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ ನಾಡಿನ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಡೊಳ್ಳು ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ ಹಾಗೂ ಕೀಲುಕುದುರೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾವಿದರು ಹೆಜ್ಜೆ ಹಾಕಿದರು.

ಪಟ್ಟಣದ ಐತಿಹಾಸಿಕ ಗಾಂಧಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಾಗಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಕೈಯಲ್ಲಿ ಕನ್ನಡ ಧ್ವಜ ಹಿಡಿದು “ಜೈ ಕರ್ನಾಟಕ”, “ಕರ್ನಾಟಕ ಮಾತೆ ಕಿ ಜೈ” ಎಂಬ ಜಯಘೋಷಗಳೊಂದಿಗೆ ಮೆರವಣಿಗೆಯುದ್ದಕ್ಕೂ ಕನ್ನಡಾಭಿಮಾನ ಮೆರೆದರು.

ಈ ಅದ್ಧೂರಿ ಸಂಭ್ರಮಾಚರಣೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಶ ಸಂಪಗಾವಿ, ತಹಶೀಲ್ದಾರ್ ರಾಜೇಶ ಬುರ್ಲಿ, ಮುಖ್ಯ ಅಧಿಕಾರಿ ಜಗದೀಶ ಈಟ್ಟಿ, ಮುಖಂಡರಾದ ಸೋಮನಾಥ ಪಾಟೀಲ್, ರಾಜಶೇಖರ ಖನದಾಳೆ, ಸಂತೋಷ ಕಾಂಬಳೆ, ಶಾಂತಾರಾಮ ಎಂಟಹೆತನವರ, ಬಿ. ಎ. ಕುಂಬಾರ, ರಾಮಾ ಮಾನೆ, ಗುಲಾಬ ಹುಸೇನ ಬಾಗವಾನ, ಸಾಬೀರ್ ಜಮಾದಾರ, ಅನಿಲ್ ಮಾನೆ, ನಾಗರಾಜ್ ಮೇಧಾರ, ಸಂಜೀವ ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಬಸವರಾಜ ಸಾಜನೇ, ನಾಗೇಶ್ ಮಾಳಿ, ರಾಹುಲ, ಸೂರಜ ಜಮಾದಾರ, ಕುಮಾರ, ಯಾಸಿನ್ ಜಮಾದಾರ ಸೇರಿದಂತೆ ಸ್ಥಳೀಯ ಗಣ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ನೂರಾರು ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!