Belagavi

ರಾಷ್ಟ್ರೀಯ ಜೂಡೋ ಟೂರ್ನಿ: ಬೆಳಗಾವಿಯ ಉದಯೋನ್ಮುಖ ಕ್ರೀಡಾಪಟುಗಳಿಗೆ ಭರ್ಜರಿ ಪದಕ ಬೇಟೆ

Share

ದೆಹಲಿಯಲ್ಲಿ ನಡೆದ 70ನೇ ರಾಷ್ಟ್ರೀಯ ಹಂತದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜೂಡೋ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಮೂವರು ವಿದ್ಯಾರ್ಥಿಗಳು ಬೆಳ್ಳಿ ಹಾಗೂ ಕಾಂಸ್ಯ ಪದಕಗಳನ್ನು ಗೆಲ್ಲುವ ಮೂಲಕ ನಾಡಿಗೆ ಮತ್ತು ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ದೆಹಲಿಯಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ 70ನೇ ರಾಷ್ಟ್ರೀಯ ಮಟ್ಟದ ಜೂಡೋ ಕ್ರೀಡಾಕೂಟದಲ್ಲಿ ಬೆಳಗಾವಿಯ ಕ್ರೀಡಾಪಟುಗಳು ತಮ್ಮ ಪ್ರತಿಭೆ ಮೆರೆದಿದ್ದಾರೆ. ಕಾಕತಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾಯತ್ರಿ ಬೆಳಗಾವಿ 32 ಕೆಜಿ ವಿಭಾಗದಲ್ಲಿ ಕಾಂಸ್ಯ ಪದಕ, ವಿ.ಆರ್.ಕೆ.ಸಿ. ಕಾಕತಿ ಶಾಲೆಯ ವಿದ್ಯಾರ್ಥಿ ಸಾಹಿಲ್ ನಾಯಕ್ 25 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಮುತ್ಯಾನಟ್ಟಿ ಸರ್ಕಾರಿ ಶಾಲೆಯ ಶ್ರೇಯಾ ಬೆಳಗಾವಿ 27 ಕೆಜಿ ವಿಭಾಗದಲ್ಲಿ ಕಾಂಸ್ಯ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂವರೂ ಸಾಧಕರು ಬೆಳಗಾವಿ ಜಿಲ್ಲೆಯ ಕ್ರೀಡಾ ಹಿರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ಅಭೂತಪೂರ್ವ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಬೆಳಗಾವಿ ನಗರ ಬಿಇಒ ರವಿ ಭಜಂತ್ರಿ, ಬೆಳಗಾವಿ ಗ್ರಾಮೀಣ ಬಿಇಒ ಪುಂಡಲೀಕ ಚೌವ್ಹಾಣ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜುನೇದಿ ಪಟೇಲ್, ಟಿಪಿಇಒ ಸಾಧನಾ ಬದ್ರಿ ಹಾಗೂ ಅಂತರರಾಷ್ಟ್ರೀಯ ಜೂಡೋ ಆಟಗಾರರಾದ ಯಲ್ಲಪ್ಪ ಗೋರವ್, ವಿಷ್ಣು ಗೋರವ್ ಅಭಿನಂದಿಸಿದ್ದಾರೆ. ಅಲ್ಲದೆ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಅಕ್ಕಿ, ಮುಖ್ಯಾಧ್ಯಕ್ಷ ಅಶೋಕ ಖೋತ್, ಶಾಲೆಯ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಮಂಡಳಿ ಮತ್ತು ಗ್ರಾಮದ ಹಿರಿಯ ನಾಗರಿಕರು ಪ್ರಶಸ್ತಿ ವಿಜೇತರಿಗೆ ಹಾರ್ದಿಕ ಶುಭಾಶಯ ಕೋರಿದ್ದಾರೆ.

Tags:

error: Content is protected !!