ಆಂಕರ್ ಪಾರ್ಟ್: ಬೆಳಗಾವಿಯ ಐತಿಹಾಸಿಕ ಖಡೇಬಜಾರ್ ಸಂಯುಕ್ತ ಮಹಾರಾಷ್ಟ್ರ ಚೌಕದಲ್ಲಿರುವ ಜಾಗೃತ ಶ್ರೀ ಮಾರುತಿ ದೇವಸ್ಥಾನದ ಜೀರ್ಣೋದ್ಧಾರದ ಸಂಭ್ರಮದ ಕಳಸಾರೋಹಣ ಕಾರ್ಯಕ್ರಮವು ಅಪಾರ ಭಕ್ತಿ ಹಾಗೂ ಸಡಗರದಿಂದ ನೆರವೇರಿತು. ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಈ ಧಾರ್ಮಿಕ ಉತ್ಸವದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ಮತ್ತು ವಿಶೇಷ ಪೂಜೆಗಳು ಜರುಗಿದವು.

ಶ್ರೀ ಹನುಮಾನ್ ಜಯಂತಿ ಉತ್ಸವ ಮಂಡಳ ಟ್ರಸ್ಟ್; ಸಂಯುಕ್ತ ಮಹಾರಾಷ್ಟ್ರ ಚೌಕ, ಖಡೇಬಜಾರ್ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಬೆಳಿಗ್ಗೆ ಗಣೇಶಪೂಜನ, ಮಹಾಭಿಷೇಕ್, ಪುಣ್ಯಾಹವಚನ, ಮುಖ್ಯದೇವತಾ ಸ್ಥಾಪನೆ, ನವಗ್ರಹ ಸ್ಥಾಪನೆ, ಹೋಮ ಕಳಸ ಶುದ್ಧಿ, ಹವನ ಹಾಗೂ ಪೂರ್ಣಾಹುತಿ ಕಾರ್ಯಗಳು ನೆರವೇರಿದವು. ವಾಸುದೇವ ಪಾಂಡುರಂಗ ಛತ್ರೆ, ಗಣೇಶ್ ಚಿಂತಾಮಣಿ ಫಡಕೆ, ಅವಧೂತ ಗಣೇಶ್ ಜೋಶಿ, ನಾಗೇಶ್ ದೇಶಪಾಂಡೆ ಹಾಗೂ ಚೈತನ್ಯ ವಾಸುದೇವ ಛತ್ರೆ ಅವರ ಪೌರೋಹಿತ್ಯದಲ್ಲಿ ಈ ಎಲ್ಲಾ ಧಾರ್ಮಿಕ ವಿಧಿಗಳು ಜರುಗಿದವು. ಟ್ರಸ್ಟ್ನ ಅಧ್ಯಕ್ಷ ಸುನೀಲ್ ನಾಯ್ಕ್ ಹಾಗೂ ಸ್ಮಿತಾ ನಾಯ್ಕ್ ದಂಪತಿಗಳು ಮುಖ್ಯಯಜಮಾನರಾಗಿ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಂಡರು.
ಖಡೇಬಜಾರ್ ನಾನಾ ಶಂಕರಶೇಠ ಮಾರ್ಗದಿಂದ ಆರಂಭಗೊಂಡ ಕಳಸದ ವೈಭವೋಪೇತ ಮೆರವಣಿಗೆಯು ಬಸವಾಣ್ಣಾ ಬ್ಯಾಂಡ್ ವಾದ್ಯಗೋಷ್ಟಿಯ ಭಕ್ತಿಗೀತೆಗಳೊಂದಿಗೆ ಸಾಗಿತು. ೨೫ ಕ್ಕೂ ಅಧಿಕ ಮುತ್ತೈದೆಯರು ತಲೆಯ ಮೇಲೆ ಕಳಸ ಹೊತ್ತು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಮಾರುತಿ ದೇವಾಲಯದ ಎದುರು ಆಗಮಿಸಿದ ಕಳಸವನ್ನು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಶ್ರೀ ಸ್ವಾಮಿ ಆತ್ಮಾಣಂದಜಿ ಮಹರಾಜ್ ಅವರು ಪೂಜಿಸಿ, ಪುಷ್ಪಹಾರ ಅರ್ಪಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘಟಕರು ಹಾಗೂ ಗಣ್ಯರಾದ ಉಪಾಧ್ಯಕ್ಷ ವಿಶ್ವಜಿತ್ ಶಂಕರರಾವ್ ದೇಶಪಾಂಡೆ, ಸೆಕ್ರೆಟರಿ ಮಾರುತಿ ಭೂಪಾಲ್ ವಿಭುತೆ, ಉಪಸೆಕ್ರೆಟರಿ ರಾಜೇಂದ್ರ ವಸಂತ ರಾವ್ ಸಂಪಗಾಂವ್ಕರ್, ಖಜಾನಚಿ ಭಾಲಚಂದ್ರ ಗೋವಿಂದರಾವ್ ಗಾಡ್ಗಿಳ್, ನಗರಸೇವಕ ಜಯತೀರ್ಥ ಸೌಂದತ್ತಿ ಸೇರಿದಂತೆ ರವಿ ಕಲಘಟಗಿ, ಪುರೋಹಿತ್ ಸಂಜಯ್ ಕಲಘಟಗಿ, ಸಚಿನ್ ಕೆಕ್ರೆ, ಹೇಮಂತ್ ಹಾವಳ್, ರಾಹುಲ್ ಕಲಘಟಗಿ, ಸಾಯಿ ಕಲಘಟಗಿ, ವಿಕಾಸ್ ಕಲಘಟಗಿ, ರೋಹಿತ್ ಕಪಾಡಿಯಾ, ಪ್ರಸಾದ್ ಹಾವಳ್, ಅಶೋಕ್ ಪೈ, ಸುಭಾಷ್ ಇನಾಮದಾರ್, ಸುಧೀರ್ ಕಾರ್ಲೇಕರ್, ಮನೋಜ್ ತೆಂಗಶೆ, ಸತೀಶ್ ನಾಯ್ಕ್, ಪ್ರಸಾದ್ ಕಳ್ಳೀಮನಿ, ಸುಭಾಷ್ ಕಟ್ಟಿ ಹಾಗೂ ಇನ್ನಿತರ ಸದಸ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು ತೀರ್ಥಪ್ರಸಾದ ಸ್ವೕಕರಿಸಿದರು.
