ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಹಾಲಿನ ದರ ಲೀಟರ್ಗೆ 8 ರಿಂದ 10 ರೂಪಾಯಿ ಹೆಚ್ಚಳ ಮಾಡಲು ರೈತರು ಹಾಗೂ ಒಕ್ಕೂಟಗಳಿಂದ ಭಾರಿ ಒತ್ತಡವಿದೆ. ಈ ಕುರಿತು ಇಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಇದೇ ವೇಳೆ ಸಹಕಾರ ಇಲಾಖೆಯಡಿ ನಿರುದ್ಯೋಗ ನಿವಾರಣೆಗೆ ಮಹತ್ವದ ಹೊಸ ಯೋಜನೆಯೊಂದನ್ನು ಅವರು ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಕಾರ ಸಚಿವ ಲಕ್ಷ್ಮಣ್ ಸವದಿ, ಭೀಕರ ಬರಗಾಲದಿಂದಾಗಿ ರೈತರಿಗೆ ರಾಸುಗಳ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಹಾಲಿನ ದರ ಏರಿಸುವಂತೆ ವ್ಯಾಪಕ ಬೇಡಿಕೆ ಬಂದಿದ್ದು, ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು. ಇನ್ನು ಸಹಕಾರ ಇಲಾಖೆಯಲ್ಲಿ ಪಾರದರ್ಶಕತೆ ತರಲು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಿಸಲು ಹೊಸ ಯೋಜನೆಯನ್ನು ಪ್ರಕಟಿಸಿದ ಅವರು, ರಾಜ್ಯದಲ್ಲಿರುವ 60 ಸಾವಿರಕ್ಕೂ ಹೆಚ್ಚು ಸಹಕಾರ ಸಂಘಗಳ ವಾರ್ಷಿಕ ಆಡಿಟ್ ನಡೆಸಿ ಲೋಪದೋಷಗಳನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಆಡಿಟ್ ಅಧಿಕಾರಿಗಳ ಅಭಾವವಿರುವ ಕಾರಣ ಕಂದಾಯ ಇಲಾಖೆಯ ಲೈಸೆನ್ಸ್ ಸರ್ವೇಯರ್ ಮಾದರಿಯಲ್ಲಿ ಬಿಬಿಎ, ಎಂಬಿಎ, ಎಂ.ಕಾಂ ಹಾಗೂ ಬಿ.ಎಸ್ಸಿ ಪದವೀಧರರಿಗೆ 6 ತಿಂಗಳ ತರಬೇತಿ ನೀಡಿ ಮಾನ್ಯತಾ ಪತ್ರ ನೀಡಲಾಗುವುದು. ಈ ಅಭ್ಯರ್ಥಿಗಳಿಗೆ ಇಲಾಖೆಯ ಪ್ರತಿ ಸಂಘದ ಆಡಿಟ್ ಜವಾಬ್ದಾರಿ ನೀಡಲಿದ್ದು, ತಿಂಗಳಿಗೆ ಉತ್ತಮ ಆದಾಯ ಗಳಿಸಲು ಅವಕಾಶವಾಗಲಿದೆ. ನವೆಂಬರ್ 14 ರಿಂದ ಸಹಕಾರ ಮಂಡಳಿಯಿಂದ 8 ಕೇಂದ್ರಗಳಲ್ಲಿ ತರಬೇತಿ ಶಿಬಿರ ಆರಂಭವಾಗಲಿದ್ದು, ಸಾಮಾನ್ಯ ಅಭ್ಯರ್ಥಿಗಳಿಗೆ 10 ಸಾವಿರ ರೂ. ಶುಲ್ಕ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಸಿಗಲಿದೆ. ಅರ್ಜಿ ಪ್ರಕ್ರಿಯೆ ನಾಳೆಯಿಂದಲೇ ಪ್ರಾರಂಭವಾಗಲಿದೆ ಎಂದು ಸಚಿವರು ವಿವರಿಸಿದರು.
