ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಆಬಾ ಹಾಗೂ ಹಿಂದ್ ಸ್ಪೋರ್ಟ್ಸ್ ಕ್ಲಬ್ನ ಪ್ರತಿಭಾನ್ವಿತ ಈಜುಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು ೧೨ ಪದಕಗಳನ್ನು ಬಾಚಿಕೊಂಡಿದ್ದಾರೆ. ಆರೋಹಿ, ಮಯಾಂಕ್, ಓಂ ಹಾಗೂ ಶುಭಮ್ ಸೇರಿದಂತೆ ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಜ್ಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜರುಗಿದ ಈ ಜಾಗೃತ ಕ್ರೀಡಾಕೂಟದಲ್ಲಿ ನಮ್ಮ ನಗರದ ಆಬಾ ಮತ್ತು ಹಿಂದ್ ಸ್ಪೋರ್ಟ್ಸ್ ಕ್ಲಬ್ನ ಈಜುಪಟುಗಳು ಬರೋಬ್ಬರಿ ೮ ಚಿನ್ನ ಹಾಗೂ ೪ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.
ವಿಶೇಷ ಚೇತನ ಈಜುಪಟುಗಳಾದ ಆರೋಹಿ ಮೂರು, ಮಯಾಂಕ್ ಎರಡು, ಓಂ ಎರಡು ಮತ್ತು ಶುಭಮ್ ಒಂದು ಚಿನ್ನದ ಪದಕ ಪಡೆದು ಮಿಂಚಿದ್ದಾರೆ. ತರಬೇತುದಾರರ ಶ್ರಮ ಹಾಗೂ ಪದಾಧಿಕಾರಿಗಳ ಪ್ರೋತ್ಸಾಹದಿಂದ ಈ ಐತಿಹಾಸಿಕ ಜಯ ಸಾಧ್ಯವಾಗಿದ್ದು, ವಿಜೇತ ಕ್ರೀಡಾಪಟುಗಳಿಗೆ ಗಣ್ಯರಿಂದ ಅದ್ಧೂರಿ ಸನ್ಮಾನ ನೆರವೇರಿದೆ.
