ಚಿಕ್ಕೋಡಿ: ತಾಲೂಕಿನ ಅರಿಹಂತ ಶುಗರ್ಸ್ ಹಾಗೂ ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಂಬಲ ಬೆಲೆ (ದರ) ಘೋಷಣೆಯಾಗುವವರೆಗೆ ತಮ್ಮ ಗೋದಾಮುಗಳಿಂದ ಸಕ್ಕರೆ ಮಾರಾಟ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಕಾರ್ಖಾನೆಯ ಆಡಳಿತ ಮಂಡಳಿಗೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ ಹಾಗೂ ತಾಲೂಕಾಧ್ಯಕ್ಷ ಮನೋಜ ಮನಗೂಳಿ ಅವರ ನೇತೃತ್ವದಲ್ಲಿ ರೈತರು ಒಗ್ಗೂಡಿ ಎರಡೂ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳಿಗೆನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ ಅವರು ಪ್ರಸಕ್ತ ಸಾಲಿನ ಕಬ್ಬಿನ ಸೂಕ್ತ ದರ ಇನ್ನೂ ಅಂತಿಮವಾಗಿ ಘೋಷಣೆಯಾಗಿಲ್ಲ. ರೈತರಿಗೆ ನ್ಯಾಯಯುತ ಬೆಲೆ ಸಿಗುವವರೆಗೆ ಹಾಗೂ ದರ ಘೋಷಣೆಯಾಗುವವರೆಗೂ ಕಾರ್ಖಾನೆಗಳು ತಮ್ಮ ಗೋದಾಮಿನಲ್ಲಿರುವ ಸಕ್ಕರೆಯನ್ನು ಮಾರಾಟ ಮಾಡಬಾರದು ಎಂದು ಆಡಳಿತ ಮಂಡಳಿಗೆ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದು ಹೇಳಿದರು.
ರೈತರ ಹಿತದೃಷ್ಟಿಯಿಂದ ಕಾರ್ಖಾನೆಗಳು ತಕ್ಷಣವೇ ಕಬ್ಬಿನ ದರವನ್ನು ಪ್ರಕಟಿಸಬೇಕು ಹಾಗೂ ಅಲ್ಲಿಯವರೆಗೆ ಸಕ್ಕರೆ ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ರೈತ ಮುಖಂಡರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಸದರಿ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ರೈತ ಸಂಘದ ಪ್ರಮುಖ ಮುಖಂಡರು ಹಾಗೂ ಭಾಗದ ನೂರಾರು ರೈತರು ಉಪಸ್ಥಿತರಿದ್ದರು.
