ಕಾಗವಾಡ: ತಾಲೂಕಿನ ಕಟ್ಟಡ ನಿರ್ಮಾಣ ಕಾರ್ಮಿಕರು ಸದ್ಯ ತೀವ್ರ ಬರದ ಪರಿಸ್ಥಿತಿಯಿಂದಾಗಿ ಸಂಕಷ್ಟದಲ್ಲಿದ್ದು, ಪ್ರತಿಯೊಬ್ಬ ಕಾರ್ಮಿಕನಿಗೂ ತಿಂಗಳಿಗೆ 5,000 ರೂಪಾಯಿ ಸಹಾಯಧನ ನೀಡಬೇಕೆಂದು ಒತ್ತಾಯಿಸಿ ನವೆಂಬರ್ 2 ರಂದು ತಹಶೀಲ್ದಾರ್ ಕಚೇರಿಯ ಎದುರು ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ಅಷ್ಪಾಕ್ ಮುಲ್ಲಾ ಹಾಗೂ ಸಲಹಾ ಸಮಿತಿ ಸದಸ್ಯ ಅರುಣ್ ಜೋಶಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಕಾಗವಾಡದ ತಾಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ಈಗಾಗಲೇ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘ ಸ್ಥಾಪನೆಯಾಗಿ ಐದು ವರ್ಷಗಳು ಕಳೆದಿದ್ದು, ಪ್ರಸ್ತುತ 400 ಕಾರ್ಮಿಕರು ಸದಸ್ಯರಾಗಿದ್ದಾರೆ. ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ 220 ಗೌಂಡಿ, 60 ಕೂಲಿ ಕಾರ್ಮಿಕರು, 70 ಸೆಂಟ್ರಿಂಗ್ ಹಾಗೂ 30 ಪೇಂಟಿಂಗ್ ಕಾರ್ಮಿಕರು ದಿನನಿತ್ಯ ಕಾಯಕ ಮಾಡುತ್ತಿದ್ದಾರೆ. ಆದರೆ, ಈ ವರ್ಷ ಸಮರ್ಪಕ ಮಳೆಯಾಗದೆ ಬರದ ಛಾಯೆ ಆವರಿಸಿದ್ದರಿಂದ ಕಾರ್ಮಿಕರ ಕೈಗೆ ಕೆಲಸವಿಲ್ಲದೆ ಜೀವನ ಸಾಗಿಸುವುದು ತೀವ್ರ ಕಷ್ಟಕರವಾಗಿದೆ. ಆದ್ದರಿಂದ ಈ ಕುಟುಂಬಗಳ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ರಾಜ್ಯ ಸರ್ಕಾರವು ಯಾವುದೇ ಸರ್ಕಾರಿ ಕಟ್ಟಡ ನಿರ್ಮಾಣ ಅಥವಾ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಈ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಳ್ಳಬೇಕು ಮತ್ತು ಪ್ರತಿಯೊಂದು ಕಾರ್ಮಿಕ ಕುಟುಂಬಕ್ಕೂ ತಿಂಗಳಿಗೆ 5,000 ರೂಪಾಯಿ ಸಹಾಯಧನ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಸಂಜೀವ ಕೋರೆ, ಮೊಹಮ್ಮದ್ ಲಾಲ್ ಜಮಖಾನೆ, ಅನಿಲಸಿಂಗ್ ರಜಪೂತ್, ಅಮರ ಸಿಂಧೆ, ಸಂಸ್ಥೆಯ ಸಲಹೆಗಾರರಾದ ನ್ಯಾಯವಾದಿ ಕಾಕಾ ಪಾಟೀಲ್, ಪ್ರಕಾಶ್ ಚೌಗುಲೆ, ಅಣ್ಣಾಸಾಹೇಬ್ ಅವಟಿ, ಅರುಣ್ ಗಣೇಶವಾಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ಕಾರ್ಮಿಕರ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
