BELAGAVI

ಮಂಗಸೂಳಿಯಲ್ಲಿ ಕಾಗವಾಡ ತಾಲೂಕು ಆಡಳಿತದಿಂದ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆ ನಿರ್ಧಾರ

Share

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಾಯ-ಸಹಕಾರ ನೀಡಲಾಗುವುದು. ಎಲ್ಲರೂ ಒಗ್ಗೂಡಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಅಥಣಿ ಡಿವೈಎಸ್ಪಿ ಪ್ರಸನ್ನಕುಮಾರ ಹೇಳಿದರು.

ಮಂಗಳವಾರ ಮಂಗಸೂಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, “ನಾವೆಲ್ಲರೂ ಭಾರತೀಯರು ಹಾಗೂ ಕನ್ನಡ ತಾಯಿಯ ಮಕ್ಕಳು. ಕನ್ನಡ ನಾಡಿನಲ್ಲಿ ನೆಲೆಸಿರುವ ನಾವೆಲ್ಲರೂ ಕನ್ನಡ ತಾಯಿಯ ಸೇವೆ ಮಾಡುವುದು ನಮ್ಮ ಪರಮ ಕರ್ತವ್ಯವಾಗಿದೆ. ಕಳೆದ ಅನೇಕ ವರ್ಷಗಳಿಂದ ಮಂಗಸೂಳಿಯಲ್ಲಿ ಭಾಷಾಭೇದ ಮರೆತು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದೀರಿ. ಅದೇ ಪರಂಪರೆಯನ್ನು ಈ ವರ್ಷವೂ ಮುಂದುವರಿಸೋಣ” ಎಂದರು.(ಬೈಟ್)

ನೂತನ ಡಿವೈಎಸ್ಪಿ ಪ್ರಸನ್ನಕುಮಾರ ಅವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಪೂಜಾರಿ ಅವರು ಸನ್ಮಾನಿಸಿದರು.

ತಹಶೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಮಂಗಸೂಳಿ ಗ್ರಾಮದ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವರ್ಷವೂ ಅದೇ ಸಂಪ್ರದಾಯವನ್ನು ಮುಂದುವರಿಸಿ, ರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.(ಬೈಟ್)

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ, ಮಂಗಸೂಳಿ ಗ್ರಾಮದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಪರಸ್ಪರ ಸೌಹಾರ್ದದಿಂದ ಒಂದಾಗಿ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ. ಗ್ರಾಮದಲ್ಲಿ ಭಾಷಾ ಸಾಮರಸ್ಯದೊಂದಿಗೆ ಆಚರಣೆ ನಡೆಸುವ ಪರಂಪರೆ ಇದೆ. ಆದ್ದರಿಂದ ನವೆಂಬರ್ 1ರಂದು ಎಲ್ಲರೂ ಒಗ್ಗೂಡಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸೋಣ ಎಂದು ಕರೆ ನೀಡಿದರು.(ಬೈಟ್)

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮಂಗಸೂಳಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ವೀರಣ್ಣ ವಾಲಿ ಮಾತನಾಡಿ, ಕನ್ನಡ ಭಾಷೆ ನಮ್ಮ ಮಾತೃಭಾಷೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮದ ಆರಾಧ್ಯ ದೇವಿ ಭುರೇಶ್ವರಿ ದೇವಿಯ ಮೇಲಿನ ಭಕ್ತಿಯೊಂದಿಗೆ ಕನ್ನಡ ನಾಡು, ನುಡಿಯ ರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಕನ್ನಡ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು ಎಂದು ಹೇಳಿದರು.(ಬೈಟ್)

ಸಭೆಯಲ್ಲಿ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ್, ಕರವೇ ಅಧ್ಯಕ್ಷ ದತ್ತಾ ಪೂಜಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಿದಾನಂದ ಮಾಳಿ, ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪೂಜಾರಿ, ವರ್ತಕರ ಸಂಘದ ಉಪಾಧ್ಯಕ್ಷ ರಾಜು ಶೆಟ್ಟಿ, ಪ್ರಮೋದ ಪೂಜಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಜಯ ಸೂರ್ಯವಂಶಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಕದಂ, ಕರವೇ ಕಾರ್ಯಕರ್ತರಾದ ದಿನೇಶ ಕೊರವಿ, ಬಂಡು ಪಾಟೀಲ, ದಿಲೀಪ ಮಗದುಮ, ರಾಜು ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪಿಡಿಒ ಸಂಜಯ ಸೂರ್ಯವಂಶಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Tags:

error: Content is protected !!