ಬೆಳಗಾವಿಯಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಡಿಸೆಂಬರ್ 7 ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಈ ಕುರಿತು ಅಗತ್ಯ ಪೂರ್ವ ಸಿದ್ಧತೆಗಳನ್ನು ತಕ್ಷಣವೇ ಆರಂಭಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿ ಜ್ಯೋತಿ ಅವರಿಗೆ ಈ ಕುರಿತು ಅಧಿಕೃತ ಪತ್ರ ಬರೆದಿದ್ದು, ಅಧಿವೇಶನಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಅಗತ್ಯ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ. ಡಿಸೆಂಬರ್ 7 ರಿಂದ ಪ್ರಾರಂಭವಾಗಲಿರುವ ಈ ಹತ್ತು ದಿನಗಳ ಅಧಿವೇಶನಕ್ಕಾಗಿ ಸುವರ್ಣ ವಿಧಾನ ಸೌಧದಲ್ಲಿ ಸಚಿವಾಲಯದ ಹಂತದ ಸಿದ್ಧತೆಗಳು, ಭದ್ರತೆ ಹಾಗೂ ವಸತಿ ವ್ಯವಸ್ಥೆಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳು ಈ ಬಾರಿಯ ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆಯಿದೆ.
