Accident

ರಸ್ತೆ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಲ್ಲಿದ್ದ ಯುವತಿ ದುರ್ಮರಣ

Share

ಚಿಕ್ಕೋಡಿ:ಬೊರಗಾವ-ಬೆಡಕಿಹಾಳ ರಸ್ತೆಯ ಬೊರಗಾವವಾಡಿ-ಶಿರೋಳೆ ಮಳಕೆ ಬಳಿ ಸಂಭವಿಸಿದ ಮುಖಾಮುಖಿ ದ್ವಿಚಕ್ರ ವಾಹನಗಳ ಭೀಕರ ಅಪಘಾತದಲ್ಲಿ ಡಿ.ಫಾರ್ಮಸಿ ಪದವೀಧರೆ, ಯುವತಿ ಕುಮಾರಿ ಪ್ರೀತಿ ಬಾಳಾಸೋ ಗೌರಾಯಿ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಪಟ್ಟಣಕುಡಿ ನಿವಾಸಿಯಾದ ಮೃತ ಪ್ರೀತಿ ಅವರು ತಮ್ಮ ಸಹೋದರನೊಂದಿಗೆ KA 23, HD 3880 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಪಟ್ಟಣಕುಡಿಯಿಂದ ಜಯಸಿಂಪುರದಲ್ಲಿರುವ ಸಂಬಂಧಿಕರ ಬಳಿಗೆ ತೆರಳುತ್ತಿದ್ದರು. ಈ ವೇಳೆ ಅಬ್ದುಲಾಟ್‌ನಿಂದ ಹುನ್ನರಗಿ ಕಡೆಗೆ ಭೂಮಿಪೂಜೆಗಾಗಿ MH 51, H – 4846 ಸಂಖ್ಯೆಯ ಬೈಕ್‌ನಲ್ಲಿ ಬರುತ್ತಿದ್ದ ಪ್ರಥಮೇಶ್ ಕಾಂಬಳೆ ಅವರ ವಾಹನವು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

 

ಡಿಕ್ಕಿಯ ತೀವ್ರತೆಗೆ ರಸ್ತೆಗೆ ಬಿದ್ದ ಪ್ರೀತಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ತಕ್ಷಣವೇ ಗಾಯಗೊಂಡ ಪ್ರೀತಿಯನ್ನು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ಸೋದರ ಹಾಗೂ ಸ್ಥಳೀಯರು ಕರೆದೊಯ್ದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮತ್ತೊಂದು ಬೈಕ್‌ನ ಸವಾರರಾದ ಪ್ರಥಮೇಶ್ ಕಾಂಬಳೆ ಹಾಗೂ ಪ್ರೇಮ್ ಕಾಂಬಳೆ ಅವರಿಗೆ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿವೆ.

ಬೊರಗಾವವಾಡಿ – ಬೊರಗಾವ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಆ ಗುಂಡಿಗಳನ್ನು ತಪ್ಪಿಸಲು ಹೋಗಿಯೇ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಭಾರಿ ಶಬ್ದ ಕೇಳಿ ಸುತ್ತಮುತ್ತಲಿನ ಸಾರ್ವಜನಿಕರು ತಕ್ಷಣವೇ ದೌಡಾಯಿಸಿ ಸಹಾಯಕ್ಕೆ ಮುಂದಾದರೂ, ಯುವತಿಯ ಜೀವ ಉಳಿಸಲು ಸಾಧ್ಯವಾಗಲಿಲ್ಲ.

Tags:

error: Content is protected !!