ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಗುಡುಗಿದ್ದಾರೆ. ಕಬ್ಬಿಗೆ ಸೂಕ್ತ ಬೆಲೆ ಹಾಗೂ ತೂಕದ ಮೋಸ ತಡೆಯಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಕ್ರಾಂತಿ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನ್ನಪ್ಪ ಪೂಜಾರಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಒಂದು ಟನ್ ಕಬ್ಬಿಗೆ ಕಾರ್ಖಾನೆಗಳಿಂದ ₹4,500 ಹಾಗೂ ರಾಜ್ಯ ಸರ್ಕಾರದಿಂದ ₹1,000 ಪ್ರೋತ್ಸಾಹ ಧನ ಸೇರಿ ಒಟ್ಟು ₹5,500 ಬೆಲೆಯನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಆಗ್ರಹಿಸಿದ್ದಾರೆ. ಸಕ್ಕರೆ ಕಾರ್ಖಾನೆಗಳಲ್ಲಿ ನಡೆಯುತ್ತಿರುವ ಕಬ್ಬು ತೂಕದ ಮೋಸ ಹಾಗೂ ಅಕ್ರಮಗಳಿಗೆ ತಕ್ಷಣವೇ ಕಡಿವಾಣ ಹಾಕಬೇಕು. ಅಲ್ಲದೆ, ತೂಕದ ಜಾಗದ ಖರೀದಿ ಹಾಗೂ ಮೂಲಸೌಕರ್ಯಕ್ಕಾಗಿ ರಾಜ್ಯ ಸರ್ಕಾರವು ₹500 ಕೋಟಿ ಅನುದಾನವನ್ನು ತಕ್ಷಣವೇ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈಗಾಗಲೇ ಶಶಿಕಾಂತ್ ಗುರೂಜಿ ಅವರ ನೇತೃತ್ವದಲ್ಲಿ ಗುರಗುಂಜಿಯಲ್ಲಿ ಲಕ್ಷಾಂತರ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ರಾಜ್ಯದ ಸಮಸ್ತ ರೈತ ಸಂಘಟನೆಗಳು ಒಮ್ಮತದಿಂದ ಈ ಚಳವಳ ಬೆಂಬಲಿಸಿವೆ. ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿರುವ ಅವರು, ಚಳವಳಿಯ ವೇಳೆ ಗೊಂದಲ ಸೃಷ್ಟಿಸಲು ಯತ್ನಿಸುವವರು ತಿದ್ದಿಕೊಳ್ಳಬೇಕು ಎಂದಿದ್ದಾರೆ. ಮುಖ್ಯಮಂತ್ರಿಗಳು ತಕ್ಷಣವೇ ಈ ಕುರಿತು ಗಂಭೀರ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಸ್ವರೂಪದ ರೈತ ಕ್ರಾಂತಿ ನಡೆಯಲಿದೆ ಎಂದು ಚುನ್ನಪ್ಪ ಪೂಜಾರಿ ಎಚ್ಚರಿಸಿದ್ದಾರೆ.
