ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ 108 ಅಡಿಯ ತಾಯಿ ಭುವನೇಶ್ವರಿಯ ಭವ್ಯ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಒತ್ತಾಯಿಸಿ ಸಲ್ಲಿಸಲಾದ ಮನವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಶ್ರೀನಿವಾಸ್ ತಾಳೂಕರ ನೇತೃತ್ವದ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಡಿಸಿಎಂ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿ, ಅಧಿಕೃತ ಮನವಿ ಪತ್ರ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸುವರ್ಣ ಸೌಧದ ಆವರಣದಲ್ಲಿ ಈಗಾಗಲೇ ಬಾಬಾಸಾಹೇಬ್ ಅಂಬೇಡ್ಕರ್, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಮಹಾತ್ಮ ಗಾಂಧೀಜಿಯವರ ಪ್ರತಿಮೆಗಳು ಶೋಭಿಸುತ್ತಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಪ್ರತಿಮೆ ಹಾಗೂ ಗುಜರಾತ್ನ ಪಟೇಲ್ ಪ್ರತಿಮೆಗಳಂತೆ, ರಾಷ್ಟ್ರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರವೇಶ ದ್ವಾರದಲ್ಲೇ 108 ಅಡಿಯ ಭುವನೇಶ್ವರಿಯ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ‘ಸರ್ವೋದಯ ಸ್ವಯಂ ಸೇವಾ ಸಂಘ’ ಹಾಗೂ ವಿವಿಧ ಸಮಾನಮನಸ್ಕ ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದವು.ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ ಅವರ ನಿಯೋಗದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಯೋಜನೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಸಹ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದು, ಸರ್ಕಾರದ ಮಟ್ಟದಲ್ಲಿ ತಕ್ಷಣದ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಸಿಎಂ ಅವರ ಈ ಧನಾತ್ಮಕ ಸ್ಪಂದನೆಯಿಂದ ಕನ್ನಡಿಗರಲ್ಲಿ ಹರ್ಷ ಮೂಡಿದ್ದು, ಸುವರ್ಣ ಸೌಧದ ಮುಂದೆ ಕನ್ನಡಾಂಬೆಯ ಭವ್ಯ ಪ್ರತಿಮೆ ಶೀಘ್ರವೇ ತಲೆಎತ್ತುವ ಭರವಸೆ ವ್ಯಕ್ತವಾಗಿದೆ.
