ಕಬ್ಬಿಗೆ ಪ್ರತಿ ಟನ್ಗೆ ₹5,500 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟದ ಭಾಗವಾಗಿ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗೂರುಜಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಜಿಲ್ಲಾಧಿಕಾರಿಗಳು ಹಾಗೂ ಸಚಿವರ ಉಪಸ್ಥಿತಿಯಲ್ಲಿ ಹೈ-ವೋಲ್ಟೇಜ್ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಬೇಡಿಕೆಗೆ ಪೂರಕವಾದ ನಿರ್ಧಾರ ಹೊರಬರಲಿದೆ ಎಂಬ ಭರವಸೆ ನಮಗಿದೆ” ಎಂದು ತಿಳಿಸಿದರು.
ಸುವರ್ಣಸೌಧದ ಸಭೆಯಲ್ಲಿ ರೈತರ ಬೇಡಿಕೆಯಂತೆ ₹5,500 ಪೂರಕ ಬೆಲೆ ನೀಡಲು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದರೆ, ಇಂದು ಸಂಜೆ 8 ರಿಂದ 9 ಗಂಟೆಯೊಳಗೆ ಧರಣಿ ಹೋರಾಟವನ್ನು ಹಿಂಪಡೆಯಲಾಗುವುದು. ಒಂದು ವೇಳೆ ಸಭೆಯು ವಿಫಲವಾದರೆ ಅಥವಾ ರೈತರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ, ರಾತ್ರಿ 9 ಗಂಟೆಯ ನಂತರ ಮುಂದಿನ ಹೋರಾಟ ಹಾಗೂ ಬಂದ್ ಕಾರ್ಯರೂಪದ ಸ್ವರೂಪವನ್ನು ಬದಲಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆ ಮಾಲೀಕರು ನಷ್ಟದಲ್ಲಿದ್ದೇವೆ ಎಂದು ಹೇಳುತ್ತಿರುವುದನ್ನು ತಳ್ಳಿಹಾಕಿದ ಅವರು, “ಹಿಂದೆ ಸಕ್ಕರೆ ಬೆಲೆ ಕೆಜಿಗೆ ₹38 ಇದ್ದಾಗ ₹3,300 ನೀಡುತ್ತಿದ್ದರು. ಈಗ ಸಕ್ಕರೆ ದರ ಕೆಜಿಗೆ ₹52 ರಿಂದ ₹54 ಕ್ಕೇರಿದ್ದು, ಹಬ್ಬಗಳ ಸಮಯದಲ್ಲಿ ₹70-80 ತಲುಪುತ್ತದೆ. ಅಲ್ಲದೆ ಸಕ್ಕರೆಯ ಜೊತೆಗೆ ಮೊಲ್ಯಾಸಿಸ್, ಈಥನಾಲ್ ಹಾಗೂ ಸ್ಪಿರಿಟ್ನಂತಹ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಭಾರಿ ಲಾಭ ಗಳಿಸುತ್ತಿವೆ” ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಸಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಸೇರಿ ರೈತರಿಗೆ ಒಟ್ಟಾರೆಯಾಗಿ ಸೂಕ್ತ ಬೆಲೆ (₹5,500) ತಲುಪುವಂತೆ ಮಾಡಬೇಕು. ಯಾವುದೇ ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲಾ ರೈತರು ಮತ್ತು ಕಾರ್ಯಕರ್ತರು ಒಗ್ಗೂಡಿ ಈ ಹೋರಾಟ ಮಾಡುತ್ತಿದ್ದು, ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿದರು.
