ಕಳೆದ ವರ್ಷದ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರೊಂದಿಗೆ ರಾಜ್ಯ ಸರ್ಕಾರ ಮಹತ್ವದ ಮಾತುಕತೆ ನಡೆಸುತ್ತಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರೊಂದಿಗೆ ಮಹತ್ವದ ಸಭೆ ನಡೆಯುತ್ತಿವೆ.


ಬೆಳಗಾವಿಯ ಸುವರ್ಣಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಕಳೆದ ಸಾಲಿನಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವಿವಿಧ ಬೇಡಿಕೆಗಳು ಇಂದಿಗೂ ಈಡೇರದ ಹಿನ್ನೆಲೆಯಲ್ಲಿ, ಕಾರ್ಖಾನೆ ಮಾಲೀಕರು ಸರ್ಕಾರದ ಗಮನ ಸೆಳೆಯಲು ಬೆಳಗಾವಿಗೆ ಆಗಮಿಸಿದ್ದಾರೆ. ಮುಖಂಡರಾದ ಡಾ. ಪ್ರಭಾಕರ ಕೋರೆ ಹಾಗೂ ಮುರುಗೇಶ್ ನಿರಾಣಿ ಸೇರಿದಂತೆ ಪ್ರಮುಖ ಕಾರ್ಖಾನೆ ಮಾಲೀಕರು ಸುವರ್ಣಸೌಧಕ್ಕೆ ಆಗಮಿಸಿ, ಸಕ್ಕರೆ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಬ್ಬು ಬೆಂಬಲ ಬೆಲೆ ಕುರಿತು ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.


ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ಬೆನ್ನಲ್ಲೇ ಕಬ್ಬು ಬೆಳೆಗಾರರ ಕುಂದುಕೊರತೆಗಳನ್ನು ಆಲಿಸಲು ಸಿಎಂ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಈ ನಿರ್ಣಾಯಕ ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಎಂ.ಬಿ. ಪಾಟೀಲ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸಿ, ರೈತರು ಮತ್ತು ಮಾಲೀಕರ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸಲು ಶ್ರಮಿಸುತ್ತಿದ್ದಾರೆ. ಬೆಳೆಗಾರರಿಗೆ ನ್ಯಾಯಯುತ ದರ ಕೊಡಿಸುವ ಜೊತೆಗೆ ಸಕ್ಕರೆ ಕಾರ್ಖಾನೆಗಳ ಸುಗಮ ಕಾರ್ಯಾಚರಣೆಗೆ ಸೂಕ್ತ ಹಾದಿ ಕಂಡುಕೊಳ್ಳಲು ಸಚಿವರ ಸಮ್ಮುಖದಲ್ಲಿ ತೀವ್ರ ಸಮಾಲೋಚನೆ ನಡೆಯುತ್ತಿದೆ.

