ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಉತ್ಸವದ ಕೊನೆಯ ದಿನದ ಅಂಗವಾಗಿ ಪುರುಷರ ಹಾಗೂ ಮಹಿಳೆಯರ ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ ಅದ್ದೂರಿಯಾಗಿ ನಡೆಯಿತು.
ಈ ಕುಸ್ತಿ ಅಖಾಡದಲ್ಲಿ ರಾಜ್ಯ, ಅಂತರರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಕುಸ್ತಿ ಪಟುಗಳು ಭಾಗವಹಿಸಿ ತಮ್ಮ ಶಕ್ತಿ, ಸಾಮರ್ಥ್ಯ ಹಾಗೂ ಕೌಶಲ್ಯವನ್ನು ಪ್ರದರ್ಶಿಸಿದರು.

ಸುಮಾರು 63 ಜೋಡಿಗಳು ಭಾಗವಹಿಸಿದ್ದ ಈ ಕುಸ್ತಿ ಪಂದ್ಯಾವಳಿಯಲ್ಲಿ ರೋಚಕ ಸೆಣಸಾಟಗಳು ಪ್ರೇಕ್ಷಕರ ಗಮನ ಸೆಳೆದವು.
ಮಹಿಳೆಯರ ಕುಸ್ತಿ ಅಖಾಡದಲ್ಲಿ ರಣರೋಚಕ ಸೆಣಸಾಟ!
ನಂಬರ್ ಒನ್ ಮಹಿಳಾ ಕುಸ್ತಿ ಅಖಾಡದಲ್ಲಿ ಕಡೋಲಿಯ ಪೈಲ್ವಾನ್ ಸ್ವಾತಿ ಪಾಟೀಲ್ ಹಾಗೂ ಕೊಲ್ಲಾಪುರದ ಸುಹಾನಿ ದೇಸಾಯಿ ನಡುವೆ ಜಿದ್ದಾಜಿದ್ದಿನ ಕುಸ್ತಿ ನಡೆಯಿತು. ಈ ರೋಚಕ ಸೆಣಸಾಟದಲ್ಲಿ ಕಡೋಲಿಯ ಸ್ವಾತಿ ಪಾಟೀಲ್ ಗೆಲುವಿನ ನಗೆ ಬೀರಿದರು.

ಪುರುಷರ ಕುಸ್ತಿ ಅಖಾಡದಲ್ಲಿ ಮಹಾರಾಷ್ಟ್ರದ ಪೈಲ್ವಾನ್‌ಗೆ ಜಯ!
ಇನ್ನು ನಂಬರ್ ಒನ್ ಪುರುಷರ ಕುಸ್ತಿ ಅಖಾಡದಲ್ಲಿ ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಹಾಗೂ ಕ್ಯೂಬಾದ ಪೈಲ್ವಾನ್ ಕಾಸ್ಟನೆಡಾ ಕಾರ್ಡೆನಾಸ್ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆಯಿತು. ಈ ರೋಚಕ ಕುಸ್ತಿ ಪಂದ್ಯದಲ್ಲಿ ಮಹಾರಾಷ್ಟ್ರದ ಸಿಕಂದರ್ ಶೇಖ್ ಗೆದ್ದು ಬೀಗಿದರು.

ಕಿತ್ತೂರು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕುಸ್ತಿ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾದರು.
ವರದಿಗಾರ:
ಶಾನೂಲ ಮತ್ತೆಖಾನ
ಕಿತ್ತೂರು
